ಬೆಂಗಳೂರು, ಸೆ 2 (DaijiworldNews/MS): ಪೊಲೀಸ್ ಕಸ್ಟಡಿಯಲ್ಲಿದ್ದ ದಲಿತ ಯುವಕನಿಗೆ ಮೂತ್ರ ನೆಕ್ಕಿಸಿದ್ದ ಆರೋಪದ ಮೇಲೆ ಪಿಎಸ್ಐ ಅರ್ಜುನ್ ಅವರನ್ನುಸಿಐಡಿ ಪೊಲೀಸರು ಬಂಧಿಸಿದ್ದಾರೆ. ಡಿಜಿಪಿ ಬಿ. ಎಸ್. ಸಂಧು ಮಾರ್ಗದರ್ಶನದಲ್ಲಿ ಎಸ್ಪಿ ರವಿ ಚನ್ನಣ್ಣನವರ ನೇತೃತ್ವದ ತಂಡ ಅರ್ಜುನ್ ಅವರನ್ನು ಬುಧವಾರ ರಾತ್ರಿ ಬಂಧಿಸಿದೆ.
ಮೇ 10ರಂದು ಪರಿಶಿಷ್ಟ ಸಮುದಾಯದ ಯುವಕನ ಮೇಲೆ ದೌರ್ಜನ್ಯ ನಡೆಸಲಾಗಿತ್ತು, ಮೂತ್ರ ನೆಕ್ಕಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಪಿಎಸ್ಐ ಅರ್ಜುನ್ ವಿರುದ್ಧ ಮೇ 22ರಂದು ದೂರು ದಾಖಲಾಗಿತ್ತು.
ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪಿಎಸ್ಐ ಅರ್ಜುನ್ ತಲೆಮರೆಸಿಕೊಂಡಿದ್ದರು. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಇದಲ್ಲದೆ ಇತ್ತೀಚೆಗೆ ಹೈಕೋರ್ಟ್ನಲ್ಲಿ ಅರ್ಜುನ್ ಸಲ್ಲಿಸಿದ ಜಾಮೀನು ಅರ್ಜಿಯೂ ವಜಾಗೊಂಡಿತ್ತು.
ಪಿಎಸ್ಐ ಅರ್ಜುನ್ ಅವರು ದಲಿತ ಯುವಕನನನ್ನು ವಿಚಾರಣೆ ನೆಪದಲ್ಲಿ ಯುವಕನನ್ನು ತಲೆಕೆಳಗೆ ಮಾಡಿ ಕಟ್ಟಿಹಾಕಿ ಹಲ್ಲೆ ಮಾಡಿದಲ್ಲದೆ ಠಾಣೆಯಲ್ಲಿದ್ದ ಮತ್ತೊಬ್ಬ ಆರೋಪಿಯಿಂದ ಪುನೀತ್ ಬಾಯಿಗೆ ಮೂತ್ರ ಮಾಡಿಸಿದ್ದರು ಅಲ್ಲದೇ ಜಾತಿನಿಂದನೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎಂದು ಸಂತ್ರಸ್ಥ ಯುವಕ ಪುನೀತ್ ಪಿಎಸ್ಐ ಅರ್ಜುನ್ ಮೇಲೆ ಆರೋಪ ಹೊರಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.