ಮಂಡ್ಯ, ಸೆ. 01 (DaijiworldNews/PY): ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಸಂಸದೆ ಸುಮಲತಾ ಅಂಬರೀಶ್ ಅವರು ಟಾಂಗ್ ನೀಡಿದ್ದು, "ಅವರು ಹೃದಯವಂತಿಕೆ ಇರುವವರು. ಅವರು ಏನು ಬೇಕಾದರೂ ಮಾತನಾಡಲಿ. ಮನೆ ಮಾಡುವ ವೇಳೆ ಒಳ್ಳೆಯ ಹಾರೈಕೆ ಮಾಡುತ್ತಿದ್ದರೆ ಸಂತೋಷ ಪಡುತ್ತಿದ್ದೆ. ಆದರೆ, ಅವರು ಬೇರೆ ಮಾತನಾಡಿದ್ದರೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದಿದ್ದಾರೆ.
ಕೋಡಿಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅವರು ಮಾತನಾಡಿದ್ದರ ಅರ್ಥ ಏನೆಂದು ತಿಳಿದಿಲ್ಲ. ಯಾವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ ಎಂದು ಅವರೇ ತಿಳಿಸಬೇಕು. ನಾನು ಮಾತಿನಲ್ಲಿ ಮಾತ್ರವೇ ಅಲ್ಲ, ಕೆಲಸ ಮಾಡಿ ತೋರಿಸುತ್ತೇನೆ. ನಾನವು ಮಾತನಾಡಬಾರದು, ನಮ್ಮ ಕೆಲಸಗಳನ್ನು ಮಾಡಬೇಕು" ಎಂದು ಹೇಳಿದ್ದಾರೆ.
"ಸುಮಲತಾ ಅವರು ಮಂಡ್ಯದಲ್ಲಿ ಮನೆ ಮಾಡಿದರೆ ಸಂತೋಷ. ಇದರಿಂದ ನಮ್ಮ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಅವರು ಮಂಡ್ಯದ ಜನರ ಸಮಸ್ಯೆ ಕೇಳಿ ನಿವಾರಿಸಲಿ" ಎಂದು ಹೆಚ್ಡಿಕೆ ಹೇಳಿದ್ದಾರೆ.
"ಕ್ಷೇತ್ರದಲ್ಲಿ ಮನೆ ಮಾಡಿ ಕುಳಿತರೆ ಏನೂ ಪ್ರಯೋಜನವಿಲ್ಲ. ನಾನು ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಮನೆ ಮಾಡಿದ್ದೇನಾ?. ಕೆ ಆರ್ ನಗರದಲ್ಲಿ ಸಾ.ರಾ ಮಹೇಶ್ ಅವರೂ ಕೂಡಾ ಮನೆ ಮಾಡಿಲ್ಲ. ಆದರೂ, ಜನರೊಂದಿಗೆ ನಾವು ಸಂಪರ್ಕದಲ್ಲಿ ಇರಬೇಕು ಎನ್ನುವುದು ನಮ್ಮ ಮೇಲೆಯೇ ಇದೆ" ಎಂದು ಹೇಳಿದ್ದಾರೆ.