ಕೋಲಾರ, ಸೆ. 01 (DaijiworldNews/PY): "ರಾಜ್ಯದಲ್ಲಿ ಪ್ರತಿ ಬುಧವಾರ ಕೊರೊನಾ ಲಸಿಕೆ ಉತ್ಸವ ನಡೆಸುತ್ತಿದ್ದು, ಒಂದೇ ದಿನ ಸುಮಾರು ಹತ್ತು ಲಕ್ಷ ಲಸಿಕೆ ನೀಡುವ ಗುರಿ ಹೊಂದಿದ್ದೇವೆ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಾಮಾನ್ಯ ದಿನಗಳಲ್ಲಿ ಐದು ಲಕ್ಷ ಲಸಿಕೆ ನೀಡುವ ಗುರಿ ಇದೆ. ಒಂದು ತಿಂಗಳಲ್ಲಿ 1.50 ಕೋಟಿ ಡೋಸ್ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಎಲ್ಲ ವಯಸ್ಕರಿಗೆ ಡಿಸೆಂಬರ್ ವೇಳೆಗೆ ಲಸಿಕೆ ನೀಡಬೇಕು ಎನ್ನುವ ಉದ್ದೇಶವಿದೆ. ಗಡಿಭಾಗದ ಜಿಲ್ಲೆಗಳಲ್ಲಿ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಕೇಂದ್ರದ ಆರೋಗ್ಯ ಸಚಿವರು ಕೂಡಾ ಈ ಬಗ್ಗೆ ಸಲಹೆ ನೀಡಿದ್ದಾರೆ. ಗಡಿಭಾಗಗಳ ಜನರು ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಲಸಿಕೆ ಪಡೆದುಕೊಳ್ಳಬೇಕು" ಎಂದಿದ್ದಾರೆ.
"ರಾಜ್ಯಕ್ಕೆ ಆಗಸ್ಟ್ ತಿಂಗಳಿನಲ್ಲಿ 1.12 ಕೋಟಿ ಲಸಿಕೆ ಬಂದಿದೆ. ಒಂದು ತಿಂಗಳಲ್ಲಿ 1.10 ಕೋಟಿ ಲಸಿಕೆ ನೀಡಲಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಆಗಸ್ಟ್ ತಿಂಗಳಿನಲ್ಲಿಯೇ ಅಧಿಕ ಲಸಿಕೆ ನೀಡಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 1.50 ಕೋಟಿ ಲಸಿಕೆ ನೀಡುವ ಗುರಿ ಇದೆ. ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಯಮ ತರಲಾಗಿದೆ" ಎಂದು ತಿಳಿಸಿದ್ದಾರೆ.
"ಕೊರೊನಾ ಲಸಿಕೆ ಪಡೆಯದವರಿಗೆ ಪಿಂಚಣಿ ತಡೆಹಿಡಿಯುವುದನ್ನು ಸರ್ಕಾರ ಒಪ್ಪುವುದಿಲ್ಲ. ಸರ್ಕಾರ ಈ ರೀತಿಯಾದ ತೀರ್ಮಾನವನ್ನು ಎಲ್ಲೂ ಮಾಡಿಲ್ಲ. ಕಲಬುರ್ಗಿ ಸೇರಿದಂತೆ ಬೀದರ್, ಯಾದಗಿರಿ ಹಾಗೂ ಮೊದಲಾದ ಸ್ಥಳಗಳಲ್ಲಿ ಕೊರೊನಾ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ" ಎಂದಿದ್ದಾರೆ.