ಬೆಂಗಳೂರು, ಸೆ. 01 (DaijiworldNews/PY): ದೇಶದ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ 'ಡಬಲ್ ಇಂಜಿನ್' ಸರ್ಕಾರದ ದೊಡ್ಡ ಸಾಧನೆ. ದೇಶದ ಜನರಿಗೆ ದರಿದ್ರಭಾಗ್ಯ ಕಲ್ಪಿಸಿದ ಈ ಡಬಲ್ ಇಂಜಿನ್ ಸರ್ಕಾರ ಒಂದು ರೀತಿ ಸ್ಮಶಾನದ ಹೆಣವಿದ್ದಂತೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶದ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ 'ಡಬಲ್ ಇಂಜಿನ್' ಸರ್ಕಾರದ ದೊಡ್ಡ ಸಾಧನೆ. ಜನರನ್ನು ತೆರಿಗೆ ವಿಷವರ್ತುಲಕ್ಕೆ ತಳ್ಳಿರುವ ಡಬಲ್ ಇಂಜಿನ್ ಸರ್ಕಾರ, ರಕ್ತ ಹೀರುವ ತಿಗಣೆಯಂತೆ ತೆರಿಗೆ ಹೀರುತ್ತಿದೆ. ದೇಶದ ಜನರಿಗೆ ದರಿದ್ರಭಾಗ್ಯ ಕಲ್ಪಿಸಿದ ಈ ಡಬಲ್ ಇಂಜಿನ್ ಸರ್ಕಾರ ಒಂದು ರೀತಿ ಸ್ಮಶಾನದ ಹೆಣವಿದ್ದಂತೆ ಎಂದಿದ್ದಾರೆ.
ದೇಶದ ಜನ ಮೋದಿಯವರು ಹೇಳುತ್ತಿದ್ದ 'ಅಚ್ಛೇದಿನ್' ಪದವನ್ನು ತಪ್ಪಾಗಿ ಅರ್ಥೈಸಿಕೊಂಡು ಬಿಜೆಪಿಗೆ ಅಧಿಕಾರ ನೀಡಿದ್ದರು. ಈಗ ಅದೇ ಜನ ಕೇಂದ್ರ ಸರ್ಕಾರದ ತೆರಿಗೆ ದರೋಡೆ ಕಂಡು, ಅಚ್ಚೇದಿನ್ ಎಂದರೆ ಕನಸಿನಲ್ಲೂ ಬೆಚ್ಚುವಂತಾಗಿದೆ. ಮೋದಿಯವರಿಗೆ ಅಧಿಕಾರ ಕೊಟ್ಟು, ಹರುಷದ ಕೂಳಿಗಾಗಿ, ವರುಷದ ಕೂಳು ಕಳೆದುಕೊಂಡಂತಾಗಿದೆ ದೇಶದ ಜನರ ಪರಿಸ್ಥಿತಿ ಎಂದು ತಿಳಿಸಿದ್ದಾರೆ.
"ಕೇಂದ್ರ ಕಾರ್ಪೊರೇಟ್ ತೆರಿಗೆಗಳನ್ನು ಇಳಿಸಿ,ಆ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸುತ್ತಿದೆ. ಕಾರ್ಪೋರೇಟ್ ಮಿತ್ರ-ಜನಸಾಮಾನ್ಯನ ಶತ್ರುವಾಗಿರುವ ಈ ಕೇಂದ್ರ ಸರ್ಕಾರ ದೇಶದ ಪಾಲಿಗೆ ಹೆಗಲೇರಿದ ಶನಿಯಂತೆ. ಜನರನ್ನು ತೆರಿಗೆ ಮೂಲಕ ಹುರಿದು ಮುಕ್ಕುತ್ತಿರುವ ಮೋದಿ ಸರ್ಕಾರಕ್ಕೆ ಜನರ ಹಿತಕ್ಕಿಂತ ಕಾರ್ಪೊರೇಟ್ ಕುಳಗಳ ಹಿತವೇ ಮುಖ್ಯವಾಗಿದೆ" ಎಂದಿದ್ದಾರೆ.
"ಬೆಲೆಯೇರಿಕೆ ದೇಶದ ಜನರಿಗೆ ಮೋದಿ ಸರ್ಕಾರ ಕೊಟ್ಟ ಶಾಪ. 2 ವರ್ಷದ ಅವಧಿಯಲ್ಲಿ ಕೆಲ ಅಗತ್ಯ ವಸ್ತುಗಳ ಬೆಲೆ ಶೇ.200ರಷ್ಟು ಏರಿಕೆಯಾಗಿದೆ. ಆದರೆ ಜನರ ಆದಾಯ ಮೊದಲಿಗಿಂತ ಕಡಿಮೆಯಾಗಿದೆ. ಮೋದಿಯವರ ದುಬಾರಿ ದುನಿಯಾದಲ್ಲಿ ಅವರ ಕಾರ್ಪೋರೆಟ್ ಸ್ನೇಹಿತರು ಮಾತ್ರ ಬದುಕಬಹುದು. ಆದರೆ ಜನಸಾಮಾನ್ಯನ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ" ಎಂದು ಹೇಳಿದ್ದಾರೆ.