ಮೈಸೂರು, ಸೆ. 01 (DaijiworldNews/PY): "ಅರುಣ್ ಸಿಂಗ್ ಅವರು ಕೇಂದ್ರ ಸರ್ಕಾರದ ದಲ್ಲಾಳಿ. ರಾಜ್ಯಕ್ಕೆ ಆಗಮಿಸುವ ಈ ರೀತಿಯಾದ ದಲ್ಲಾಳಿಗಳಿಗೆ ರಾಜ್ಯದ ನಾಯಕರು ಇಲ್ಲಿನ ವಾಸ್ತವವನ್ನು ತಿಳಿಸಬೇಕು" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಮುಳುಗುತ್ತಿರುವ ಹಡಗು ಎಂದ ಅರುಣ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಮೈಸೂರು ಮೇಯರ್ ಆಯ್ಕೆ ಚುನಾವಣೆಯಲ್ಲಿ ಏಕೆ ಅರುಣ್ ಸಿಂಗ್ ಅವರು ಬೆಂಬಲ ಕೇಳಿದ್ದು?. ಬಿಜೆಪಿ ನಾಯಕರು ಏಕೆ ಸಾ.ರಾ ಮಹೇಶ್ ಅವರ ಕಚೇರಿಗೆ ಬಂದಿದ್ದು?. ಅವರ ಬಳಿಗೆ ನಾವೇನು ಬೆಂಬಲ ಕೋರಿ ಹೋಗಿಲ್ಲ. ಜೆಡಿಎಸ್ ಕುರಿತು ಮಾತನಾಡಿದವರು ಯಾರ್ಯಾರು ಏನೇನಾಗಿದ್ದಾರೆ ಎನ್ನುಬ ಬಗ್ಗೆ ಇತಿಹಾಸವಿದೆ. ಜೆಡಿಎಸ್ನ ಫ್ಯೂಸ್ ಕೀಳಲು ಯಾರಿಗೂ ಆಗಲ್ಲ. ಜೆಡಿಎಸ್ನ ತಳಹದಿ ಭದ್ರವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂಗೆ ದೇವೇಗೌಡರು ಮಾರ್ಗದರ್ಶನ ನೀಡುತ್ತಾರೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಬಸವರಾಜ ಬೊಮ್ಮಾಯಿ ಅವರು ಅಧಿಕಾರ ತೆಗೆದುಕೊಂಡ ಬಳಿಕ ದೇವೇಗೌರನ್ನು ಭೇಟಿಯಾಗಿದ್ದರು. ಬಳಿಕ ದೂರವಾಣಿಯಲ್ಲೂ ದೇವೇಗೌಡರು ಸಿಎಂ ಅವರನ್ನು ಸಂಪರ್ಕಿಸಿದ ಬಗ್ಗೆ ಮಾಹಿತಿ ಇಲ್ಲ. ಸಂಪರ್ಕವೇ ಇಲ್ಲದಿದ್ದರೆ ಮಾರ್ಗದರ್ಶನದ ವಿಚಾರ ಬರುವುದಿಲ್ಲ" ಎಂದಿದ್ದಾರೆ.
"ಸಿಎಂ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಒಂದು ತಿಂಗಳಾಗಿದೆ. ಈಗಲೇ ಸರ್ಕಾರ ನಡೆಯುತ್ತಿದೆ ಎಂದು ಹೇಳುವುದು ಕಷ್ಟ. ಹಳೆ ಇಂಜಿನ್ ಕೆಟ್ಟು ಹೋಗಿದೆ ಎಂದು ಹೊಸ ಇಂಜಿನ್ ಹಾಕಲಾಗಿದೆ. ಆದರೆ, ಬೋಗಿಯ ಇಂಜಿನ್ಗಳೆಲ್ಲವೂ ಕೊಳೆತು ಹೋಗಿವೆ. ಪರಿಸ್ಥಿತಿ ಈ ರೀತಿ ಇದ್ದಾಗ ಭ್ರಷ್ಟಾಚಾರ ಮುಕ್ತ ಆಡಳಿತ ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.