ಬೆಂಗಳೂರು, ಸೆ 01(DaijiworldNews/MS): ಕೊವೀಡ್ ಲಸಿಕೆ ಪಡೆಯದವರಿಗೆ ಪಡಿತರ ವಿತರಣೆ ನಿಲ್ಲಿಸುವ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ವ್ಯಾಕ್ಸಿನ್ ಪಡೆಯದಿದ್ದರೆ ರೇಷನ್ ನೀಡುವುದಿಲ್ಲ ಎನ್ನುವುದು ತಪ್ಪು ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೊವೀಡ್ ಲಸಿಕೆ ಪಡೆಯದಿದ್ದರೆ ಪಡಿತರ ನೀಡುವುದಿಲ್ಲ ಅನ್ನೋದು ತಪ್ಪು, ಜನರ ಮನವೊಲಿಸಿ ಕೋವಿಡ್ ವ್ಯಾಕ್ಸಿನ್ ಹಾಕಿಸಬೇಕು ಎಂದು ಹೇಳಿದ್ದಾರೆ.
ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ವೇಗ ಹೆಚ್ಚಿಸಲು ಚಾಮರಾಜನಗರ ಜಿಲ್ಲಾಡಳಿತ ವಿಭಿನ್ನ ಅಭಿಯಾನ ಆರಂಭಿಸಿದ್ದು, ವ್ಯಾಕ್ಸಿನೇಷನ್ ಪ್ರಮಾಣಪತ್ರ ತಂದ್ರೆ ಮಾತ್ರ ಪಡಿತರ ವಿತರಣೆ ಮಾಡುವಂತೆ ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಎಂ.ಆರ್. ರವಿ ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ತಹಶೀಲ್ದಾರರು ಸೂಚನೆ ನೀಡಿದ್ದರು ಎನ್ನಲಾಗಿದೆ. ಚಾಮರಾಜನಗರ ಜಿಲ್ಲೆಯ ಜನರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಜೀವರಕ್ಷಣೆಯ ಸಲುವಾಗಿ ಸೆಪ್ಟೆಂಬರ್ 1 ರಿಂದ ನೋ ವ್ಯಾಕ್ಸಿನೇಷನ್ - ನೋ ರೇಷನ್, ನೋ ವ್ಯಾಕ್ಸಿನೇಷನ್ - ನೋ ಪೆನ್ಷನ್ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ಮುಂದಾಗಿದ್ದರು ಸಾಕಷ್ಟು ಜಾಗೃತಿ, ನಿರಂತರ ಅರಿವು ಮೂಡಿಸುತ್ತಿದ್ದರೂ ಲಸಿಕೆ ಪಡೆಯಲು ಅಸಡ್ಡೆ ತೋರುತ್ತಿರುವವರಿಗೆ ಬಿಸಿ ಮುಟ್ಟಿಸಲು ಡಿಸಿ ರವಿ ಈ ತೀರ್ಮಾನ ಕೈಗೊಂಡಿದ್ದರು ಎನ್ನಲಾಗಿದೆ.