ನವದೆಹಲಿ, ಸೆ. 01 (DaijiworldNews/PY): ಅಡುಗೆ ಅನಿಲ ದರ ಏರಿಕೆ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, "ಸಾರ್ವಜನಿಕರನ್ನು ಹಸಿದ ಹೊಟ್ಟೆಯಲ್ಲಿ ಮಲಗುವಂತೆ ಮಾಡಿ, ತಾವು ಮಾತ್ರ ಸ್ನೇಹಿತರ ನೆರಳಿನಲ್ಲಿ ಮಲಗುತ್ತಿದ್ದಾರೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸಾರ್ವಜನಿಕರನ್ನು ಹಸಿದ ಹೊಟ್ಟೆಯಲ್ಲಿ ಮಲಗುವಂತೆ ಮಾಡಿ, ತಾವು ಮಾತ್ರ ಸ್ವತಃ ಸ್ನೇಹಿತರ ನೆರಳಿನಲ್ಲಿ ಮಲಗುತ್ತಿದ್ದಾರೆ. ಜನತೆ ಆಗುತ್ತಿರುವ ಅನ್ಯಾಯದ ವಿರುದ್ದ ದೇಶದ ಜನರು ಒಗ್ಗಟ್ಟಾಗಿ ಹೋರಾಡಲಿದ್ದಾರೆ" ಎಂದು ತಿಳಿಸಿದ್ದಾರೆ.
ಕಳೆದ ಜನವರಿ ತಿಂಗಳಿನಿಂದ ದೇಶದ ನಾಲ್ಕು ಮಹಾನಗರಗಳಲ್ಲಿ ಗೃಹಬಳಕೆಯ ಎಲ್ಪಿಜಿ ಬೆಲೆ ಹೆಚ್ಚಿರುವ ಪಟ್ಟಿಯನ್ನು ಟ್ಯಾಗ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವು, ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ಸಿಲಿಂಡರ್ಗಳ ಮೇಲಿನ ಬೆಲೆ ಏರಿಕೆ ಬಗ್ಗೆ ಹೋರಾಟ ನಡೆಸುತ್ತಿದ್ದು, ತೆರಿಗೆ ಇಳಿಕೆ ಮಾಡುವಂತೆ ಒತ್ತಾಯ ಮಾಡುತ್ತ ಬಂದಿದೆ. ಇದೀಗ ಮತ್ತೆ ಎಲ್ಪಿಜಿ ಬೆಲೆ ಏರಿಕೆ ಮಾಡಿರುವ ಬಗ್ಗೆ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.