ಬೆಳಗಾವಿ, ಸೆ. 01 (DaijiworldNews/PY): "ಸರ್ಕಾರ ನೆರೆ ಪರಿಹಾರ ನೀಡದೇ ಇದ್ದಲ್ಲಿ ಕ್ಷೇತ್ರದ ಜನರಿಗೆ ನನ್ನ ಸ್ವಂತ ಹಣದಿಂದ ಪರಿಹಾರ ನೀಡುತ್ತೇನೆ" ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ತಿಳಿಸಿದ್ದಾರೆ.
ಅಥಣಿ ತಾಲೂಕಿನ ಕೆಂಪವಾಡ ಗ್ರಾಮದ ಪರಿಹಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೆರೆ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದ್ದು, ಈ ಬಗ್ಗೆ ನಾನು ಸಿಎಂ ಅವರೊಂದಿಗೆ ಮಾತನಾಡಿದ್ದೇನೆ. ನೆರೆ ಪರಿಹಾರ ನೀಡುವಂತೆ ಮನವಿ ಕೂಡಾ ಮಾಡಿದ್ದೇನೆ. ಸಿಎಂ ಅವರು ಪರಿಹಾರ ನೀಡುತ್ತಾರೆ ಎನ್ನು ಭರವಸೆ ಇದೆ" ಎಂದಿದ್ದಾರೆ.
"ಸರ್ಕಾರ ನೆರೆ ಪರಿಹಾರ ನೀಡದೇ ಇದ್ದಲ್ಲಿ, ನನ್ನ ಸ್ವಂತ ಹಣದಿಂದ ಕ್ಷೇತ್ರದ ಜನರಿಗೆ ಪರಿಹಾರ ನೀಡುತ್ತೇನೆ. ನೆರೆ ಪರಿಹಾರ ಸಿಗದೇ ಇದ್ದ ಕಾರಣ ಕ್ಷೇತ್ರದ ಜನತೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಪ್ರತಿಭಟನೆ ನಡೆಸದಂತೆ ನಾನು ವಿನಂತಿ ಮಾಡಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.
"ಪ್ರವಾಹದ ವೇಳೆ ನದಿ ತೀರದ ಜನರು ತಮ್ಮ ಆಹಾರ ಸಾಮಾಗ್ರಿ ಹಾಗೂ ಜಾನುವಾರುಗಳ ಸ್ಥಳಾಂತರಕ್ಕೆ ಹಣ ಖರ್ಚು ಮಾಡಿದ್ದಾರೆ. ಹಾಗಾಗಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಇಲ್ಲದೇ ಇದ್ದಲ್ಲಿ ನಾನೇ ನನ್ನ ಜೇಬಿನಿಂದ ಪರಿಹಾರ ನೀಡುತ್ತೇನೆ" ಎಂದಿದ್ದಾರೆ.