ಹುಬ್ಬಳ್ಳಿ, ಸೆ. 01 (DaijiworldNews/PY): "ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ ರಾತ್ರಿ ಕಫ್ರ್ಯೂ ತೆರವುಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೆಲವು ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದ್ದು, ಇನ್ನೂ ಕೆಲ ಜಿಲ್ಲೆಗಲಲ್ಲಿ ಕೊರೊನಾ ಪಾಸಿಟಿವಿಟಿ ದರ ಏರಿಕೆ ಇರುವ ಕಾರಣ ರಾತ್ರಿ ಕಫ್ರ್ಯೂ ವಿಧಿಸಲಾಗಿದೆ. ಹಂತ ಹಂತವಾಗಿ ಇದನ್ನು ತೆರವುಗೊಳಿಸಲಾಗುವುದು" ಎಂದು ಹೇಳಿದ್ದಾರೆ.
"ಕೊರೊನಾ ನಿಯಂತ್ರಣ್ಕಕೂ ಬರಬೇಕು ಹಾಗೆಯೇ ಜನ ಜೀವನಕ್ಕೂ ತೊಂದರೆ ಉಂಟಾಗಬಾರದು. ಇದೆಲ್ಲವನ್ನೂ ಕೂಡಾ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ನೀಡುವ ವರದಿಯನ್ನು ಆಧರಿಸಿ ಸೂಕ್ತವಾದ ಕ್ರಮ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.
"ಕರಾವಳಿ ತೀರ ಪ್ರದೇಶ ಹಾಗೂ ಹೆಚ್ಚು ಅರಣ್ಯ ಪ್ರದೇಶವಿರುವ ಕಡೆ ಕೇರಳದಿಂದ ಕೆಲವು ಉಗ್ರಗಾಮಿ ಸಂಘಟನೆಗೆ ಸೇರಿದ ಶಂಕಿತರು ಬಂದಿರಬಹುದು ಎನ್ನುವ ಹಿನ್ನೆಲೆಯಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
"ರಾಷ್ಟ್ರೀಯ ತನಿಖಾ ದಳಕ್ಕೆ ಸ್ಥಳೀಯ ಪೊಲೀಸರು ಎಲ್ಲಾ ರೀತಿಯಾದ ಸಹಕಾರ ನೀಡುತ್ತಿದ್ದಾರೆ. ಕೇರಳದಿಂದ ಆಗಮಿಸುವವರ ಮೇಲೆ ನಿಗಾ ವಹಿಸಲಾಗಿದೆ. ಕರಾವಳಿ ತೀರ ಪ್ರದೇಶ ಹಾಗೂ ಹೆಚ್ಚು ಅರಣ್ಯ ಪ್ರದೇಶದ ಇರುವ ಕಡೆಗಳಲ್ಲಿ ಅನುಮಾನಾಸ್ಪದವಾಗಿ ತಿರುಗಾಡುವವರ ಮೇಲೆ ನಿಗಾ ವಹಿಸುವಂತೆ ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.