ಬೆಂಗಳೂರು, ಸೆ. 01 (DaijiworldNews/PY): ಪ್ರವಾಸಿಗರ ಸೋಗಿನಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿ ದೇವರ ದರ್ಶನಕ್ಕೆ ಬರುವ ಭಕ್ತರ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಮಹಿಳೆಯೋರ್ವಳನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಆಂಧ್ರಪ್ರದೇಶದ ಮಮತಾ (38) ಎಂದು ಗುರುತಿಸಲಾಗಿದ್ದು, ಇನ್ನೋರ್ವ ಆರೋಪಿಯಾಗಿರುವ ಆಕೆಯ ಪತಿ ತಲೆ ಮರೆಸಿಕೊಂಡಿದ್ದಾರೆ. ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮಮತಾಳ ಮೊದಲ ಪತಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹಾಗಾಗಿ, ಹತ್ತಿರದ ಸಂಬಂಧಿಯೊಂದಿಗೆ ಆಕೆಗೆ ಎರಡನೇ ವಿವಾಹವಾಗಿತ್ತು. ವಿವಾಹದ ನಂತರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಪಡೆದ ಬಳಿಕ ಬೆಂಗಳೂರಿಗೆ ಬಂದು ಜೀವನ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಅವರು ಆ.19ರಂದು ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿ ಮಾರನೇ ದಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದರು.
ಸುಬ್ರಹ್ಮಣ್ಯದ ಹೋಟೆಲ್ವೊಂದರಲ್ಲಿ ಉಪಹಾರ ಸೇವಿಸುತ್ತಿದ್ದ ವೇಳೆ ಪಕ್ಕದ ಟೇಬಲ್ನಲ್ಲಿ ಊಟ ಮಾಡುತ್ತಿದ್ದ ಪ್ರವಾಸಿದರು ಬ್ಯಾಗ್ ಬಿಟ್ಟು ಕೈ ತೊಳೆಯಲು ಹೋಗಿದ್ದರು. ಹಣದ ಅಗತ್ಯ ಇದ್ದ ಕಾರಣ ಆರೋಪಿಗಳು ಬ್ಯಾಗ್ ಕಳವು ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಬಳಿಕ ಬ್ಯಾಗ್ ತೆಗೆದು ನೋಡಿದಾಗ ಚಿನ್ನಾಭರಣ ಇರುವುದು ಕಂಡು ಆಶ್ಚರ್ಯಗೊಂಡಿದ್ದಾರೆ. ನಂತರ ಬೆಂಗಳೂರಿನ ಲಗ್ಗೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿ ನೆಲೆಸಿದ್ದರು.
ದಂಪತಿಗಳು ಕದ್ದ ಚಿನ್ನಾಭರಣದಲ್ಲಿ ಸ್ವಲ್ಪ ಅಡವಿಟ್ಟು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಆ.25ರಂದು ಯಶವಂತಪುರ 1ನೇ ಮುಖ್ತರಸ್ತೆಯ ಎಸ್ ಕೆ ಜ್ಯುವೆಲ್ಲರಿ ಅಂಗಡಿಯಲ್ಲಿ ಚಿನ್ನ ಮಾರಾಟ ಮಾಡಲು ಬಂದ ಮಮತಾ ಹಾಗೂ ಆಕೆಯ ಪತಿ ಅಂಗಡಿಯ ಸುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಗಸ್ತು ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದ ಸಮದರ್ಭ ಪತಿ ತಪ್ಪಿಸಿಕೊಂಡಿದ್ದಾನೆ. ಮಮತಾಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ಸಂದರ್ಭ ಚಿನ್ನದ ಅಂಗಡಿಯಲ್ಲಿ ಅಡವಿಟ್ಟ 10 ರಸೀದಿಗಳು ಹಾಗೂ 2 ಉಂಗುರಗಳು ಪತ್ತೆಯಾಗಿವೆ. ವಿಚಾರಣೆಯ ಸಂದರ್ಭ ಚಿನ್ನವನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳವು ಮಾಡಿರುವ ಬಗ್ಗೆ ತಿಳಿಸಿದ್ದಾಳೆ.
ಮಹಿಳೆಯಿಂದ ಸುಮಾರು 20.2 ಲಕ್ಷ ರೂ. ಮೌಲ್ಯದ 439.32 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.