ಹುಬ್ಬಳ್ಳಿ, ಸೆ. 01 (DaijiworldNews/PY): "ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ಸೆ.5ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬುಧವಾರ ಹುಬ್ಭಳ್ಳಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಸಂದರ್ಭ ಹಿಂದಿನ ವರ್ಷ ಯಾವ ರೀತಿಯಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಈ ವರ್ಷ ಕೊರೊನಾ ಪರಿಸ್ಥಿತಿ ಹೇಗಿದೆ ಎನ್ನುವ ಕುರಿತು ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ನೀಡುವ ವರದಿಯನ್ನುತಜ್ಞರ ತಂಡ ಪರಿಶೀಲಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗುವುದು" ಎಂದಿದ್ದಾರೆ.
"ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹುಬ್ಬಳ್ಳಿಗೆ ಬರಲಿದ್ದು, ಅಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳ ಹಾಗೂ ಭವಿಷ್ಯದ ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ" ಎಂದು ತಿಳಿಸಿದ್ದಾರೆ.
"ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನದಿಂದ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ಆ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಮಾಡಲಾಗುವುದು. ಬಡವರ ಹಾಗೂ ಕೊಳಗೇರಿ ನಿವಾಸಿಗಳಿಗೆ ಇನ್ನಷ್ಟು ಮೂಲ ಸೌಕರ್ಯ ನೀಡಲಾಗುವುದು" ಎಂದು ಹೇಳಿದ್ದಾರೆ.