ನವದೆಹಲಿ , ಸೆ 01(DaijiworldNews/MS): ಮೊದಲ ಬಾರಿಗೆ ಭಾರತವು ತಾಲಿಬಾನ್ ಮುಖಂಡರೊಂದಿಗೆ ಮಾತುಕತೆ ನ್ನಡೆಸಿದೆ. ಕತಾರ್ ನ ದೋಹಾದಲ್ಲಿ ಅಲ್ಲಿನ ರಾಯಭಾರಿ ದೀಪಕ್ ಮಿತ್ತಲ್ ಅವರು ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ರನ್ನು ಬೇಟಿಯಾಗಿ ಚರ್ಚಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಶೀಘ್ರ ವಾಪಸಾತಿ ಕುರಿತು ಚರ್ಚೆ ನಡೆಸಿದರು. ತಾಲಿಬಾನ್ ಪಕ್ಷದ ಮನವಿಯ ಮೇರೆಗೆ ದೋಹಾದ ಭಾರತದ ರಾಯಭಾರ ಕಚೇರಿಯಲ್ಲಿ ಈ ಸಭೆ ನಡೆದಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
'ಆಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ಭಾರತೀಯ ಪ್ರಜೆಗಳ ಸುರಕ್ಷತೆ, ಭದ್ರತೆ ಮತ್ತು ಕ್ಷಿಪ್ರ ವಾಪಸಾತಿಯ ಬಗ್ಗೆ ಚರ್ಚೆಗಳು ಕೇಂದ್ರೀಕೃತವಾಗಿದೆ. ಭಾರತಕ್ಕೆ ಭೇಟಿ ನೀಡಲು ಬಯಸುವ ಆಫ್ಘನ್ ಪ್ರಜೆಗಳು, ವಿಶೇಷವಾಗಿ ಅಲ್ಪಸಂಖ್ಯಾತರ ಪ್ರಯಾಣದ ಬಗ್ಗೆಯೂ ಮಾತುಕತೆ ನಡೆಸಲಾಯಿತು' ಎಂದು ಹೇಳಿಕೆ ತಿಳಿಸಿದೆ.
ಆಫ್ಘಾನಿಸ್ತಾನದ ಮಣ್ಣನ್ನು ಯಾವುದೇ ರೀತಿಯಲ್ಲಿ ಭಾರತೀಯ ವಿರೋಧಿ ಚಟುವಟಿಕೆಗಳು ಮತ್ತು ಬೇರೆ ದೇಶಗಳ ಉಗ್ರರು ಭಯೋತ್ಪಾದನೆಗೆ ಬಳಸಿಕೊಳ್ಳದಂತೆ ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದೆ.
ಈ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಪರಿಹರಿಸಲಾಗುವುದು ಎಂದು ತಾಲಿಬಾನ್ ಪ್ರತಿನಿಧಿ ರಾಯಭಾರಿಗೆ ಭರವಸೆ ನೀಡಿದರು ಎಂದು ಹೇಳಿಕೆ ತಿಳಿಸಿದೆ.