ಹುಬ್ಬಳ್ಳಿ, ಆ 31 (DaijiworldNews/PY): "ಕೊರೊನಾ ಪ್ರಕರಣಗಳು ಇಳಿಕೆಯಾದ ಹಿನ್ನೆಲೆ ದೇವಾಲಯಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಿಸಿದೆ. ಜನರ ಭಾವನೆಗಳಿಗೆ ಸ್ಪಂದಿಸಿ ಗಣೇಶೋತ್ಸವಕ್ಕೆ ಅವಕಾಶ ನೀಡುವುದು ಅಗತ್ಯ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಜನರ ಭಾವನೆಗಳಿಗೆ ಸ್ಪಂದಿಸಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ. ಕೊರೊನಾದ ಸಮಯದಲ್ಲಿ ಯಾವ ರೀತಿ ಗಣೇಶೋತ್ಸವ ಆಚರಿಸಬೇಕು ಎಂಬ ಬಗ್ಗೆ ತಜ್ಞರ ಅಭಿಪ್ರಾಯ ಪಡೆದುಕೊಂಡು ಸೂಕ್ತವಾದ ನಿಯಮವನ್ನು ರೂಪಿಸಿ ಅವಕಾಶ ಕಲ್ಪಿಸಲಿದೆ. ಸರ್ಕಾರ, ಗಣೇಶೋತ್ಸವಕ್ಕೆ ನಿರ್ಬಂಧಿಸಿಲ್ಲ. ಬದಲಾಗಿ ಕೆಲವು ನಿಯಮಗಳನ್ನು ವಿಧಿಸಿದೆ. ಈ ಬಗ್ಗೆ ಮತ್ತೊಮ್ಮೆ ಸಭೆ ಸೇರಿ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ" ಎಂದಿದ್ದಾರೆ.
"ಕೊರೊನಾದ ಸಮಯದಲ್ಲಿ ಚುನಾವಣೆ ಬೇಡವಾಗಿತ್ತು. ಆದರೆ, ಚುನಾವಣಾ ಆಯೋಗ ಚುನಾವಣೆ ಘೋಷಿಸಿ ಕೊರೊನಾ ನಿಯಮಗಳನ್ನು ವಿಧಿಸಿದೆ. ಚುನಾವಣಾ ಆಯೋಗದ ನಿಯಮವನ್ನು ಪಾಲಿಸುವುದು ಎಲ್ಲರ ಕರ್ತವ್ಯ" ಎಂದು ಹೇಳಿದ್ದಾರೆ.