ಬೆಳಗಾವಿ, ಆ.31 (DaijiworldNews/HR): ಕಾಂಗ್ರೆಸ್ ಪಕ್ಷದ ಸರಕಾರದ ಅವಧಿಯಲ್ಲಿ ಜನರು ಚಿರಂಜೀವಿಗಳಾಗಿದ್ದರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದ್ದಾರೆ.
ಉಚಿತ ಶವಸಂಸ್ಕಾರ ಮಾಡುವ ಬಿಜೆಪಿಯ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗವಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, "ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಯಾರು ಸತ್ತೇ ಇಲ್ಲ, ಶವಸಂಸ್ಕಾರ ಮಾಡಿಯೇ ಇಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು "ಬಿಜೆಪಿ ಸರ್ಕಾರದಲ್ಲಿ ಸಾವು ಖಚಿತ ಅಂತಾ ಡಿ.ಕೆ.ಶಿವಕುಮಾರ್ ಟೀಕೆ ಮಾಡಿದ್ದು, ಕಾಂಗ್ರೆಸ್ ಆಡಳಿತ ಮಾಡುವಾಗ ಜನರು ಚಿರಂಜೀವಿಗಳಾ? ಕಾಂಗ್ರೆಸ್ನ ಇಂತಹ ಹೇಳಿಕೆಯಿಂದಲೇ ಜನರು ಇವರನ್ನು ಸೋಲಿಸಿದ್ದಾರೆ" ಎಂದು ತಿರುಗೇಟು ನೀಡಿದ್ದಾರೆ.
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಸತ್ತು ಹೋಗಿರುವ ಕಾಂಗ್ರೆಸ್ ಶವಸಂಸ್ಕಾರದ ಬಗ್ಗೆ ಅಲ್ಲದೇ ಮತ್ಯಾವುದರ ಬಗ್ಗೆ ಮಾತನಾಡುತ್ತೆ? ಇನ್ನು ಮುಂದೆ ಇಲ್ಲೂ ಕೂಡ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅದು ಸತ್ತು ಹೋಗಿದೆ" ಎಂದು ಹೇಳಿದ್ದಾರೆ.