ಬೆಂಗಳೂರು, ಆ 31 (DaijiworldNews/PY): "ಯಾವುದೇ ಚುನಾವಣೆ ಬರಲಿ ಬಿಜೆಪಿ ಸುಳ್ಳಿನ ರೈಲು ಬಿಡಲು ತಯಾರಾಗುತ್ತದೆ!" ಯಾವ ಅಭಿವೃದ್ಧಿ ಮಾಡದೆ, ಹುಬ್ಬಳ್ಳಿ ಧಾರವಾಡದ ಜನರೆದುರು ಇನ್ನೂ ಬಣ್ಣದ ರೈಲನ್ನೇ ಬಿಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಯಾವುದೇ ಚುನಾವಣೆ ಬರಲಿ ಬಿಜೆಪಿ ಸುಳ್ಳಿನ ರೈಲು ಬಿಡಲು ತಯಾರಾಗುತ್ತದೆ! ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ, ಸಂಸದರು, ಶಾಸಕರೂ ಬಿಜೆಪಿ, ಒಬ್ಬರು ರಾಜ್ಯದ ಸಚಿವರಾಗಿದ್ದರು, ಮತ್ತೊಬ್ಬರು ಕೇಂದ್ರ ಸಚಿವರಾಗಿದ್ದಾರೆ. ಹೀಗಿದ್ದೂ ಯಾವ ಅಭಿವೃದ್ಧಿ ಮಾಡದೆ, ಹುಬ್ಬಳ್ಳಿ ಧಾರವಾಡದ ಜನರೆದುರು ಇನ್ನೂ ಬಣ್ಣದ ರೈಲನ್ನೇ ಬಿಡುತ್ತಿದ್ದಾರೆ" ಎಂದಿದೆ.
"ಇಷ್ಟು ದಿನ ಹುಬ್ಬಳ್ಳಿ ಧಾರವಾಡದ ಪಾಲಿಕೆ ಬಿಜೆಪಿ ಆಡಳಿತದಲ್ಲಿದ್ದರೂ ನೀರಿನ ಸಮಸ್ಯೆ ಬಗೆಹರಿಯಲಿಲ್ಲ, ರಸ್ತೆ ಗುಂಡಿ ಮುಚ್ಚಲಿಲ್ಲ. ಮತ್ತೊಮ್ಮೆ ಅಧಿಕಾರ ಕೊಟ್ಟರೆ ಕೆಲಸ ಮುಗಿಸುತ್ತೇವೆ ಎನ್ನುವ ಪ್ರಹ್ಲಾದ್ ಜೋಶಿ ಅವರೇ, ಒಂದು ರಸ್ತೆಯಾಗಲು ನಿಮ್ಮ ಮಗಳ ಮದುವೆ ಬರಬೇಕಾಯ್ತು! ಇನ್ನುಳಿದ ಕೆಲಸ ಪೂರೈಸಲು ಯಾರದ್ದಾದರೂ ಬಿಜೆಪಿಗರ ಮದುವೆಯೇ ಬರಬೇಕು!" ಎಂದು ಲೇವಡಿ ಮಾಡಿದೆ.
"ಮಗಳ ಮದುವೆಗಾಗಿ ತುರಾತುರಿಯಲ್ಲಿ ರಸ್ತೆ ಸಿದ್ಧಪಡಿಸಿದ ಪ್ರಹ್ಲಾದ್ ಜೋಶಿ ಅವರೇ, ಇದೇ ಶ್ರದ್ಧೆ, ಇಚ್ಛಾಶಕ್ತಿ ಉಳಿದ ಕಾಮಗಾರಿಯಲ್ಲಿ ಏಕೆ ತೋರಲಿಲ್ಲ? ಮದುವೆಗಾಗಿ ಏಕಾಏಕಿ ರಸ್ತೆ ಸಿದ್ಧಪಡಿಸುವ ಶಕ್ತಿ ಇದೆ ಎಂದಾದರೆ, ಉಳಿದ ಕಾಮಗಾರಿ ಮುಗಿಸಲು ಮತ್ತೊಮ್ಮೆ ಹು - ದಾ ಪಾಲಿಕೆ ಅಧಿಕಾರ ಕೊಡಿ ಎನ್ನಲು ನಾಚಿಕೆ ಎನಿಸುವುದಿಲ್ಲವೇ ಬಿಜೆಪಿ!?" ಎಂದು ಪ್ರಶ್ನಿಸಿದೆ.
"ಬಿಜೆಪಿ ಸರ್ಕಾರ ಕರೋನಾ ಮೊದಲ ಹಾಗೂ 2ನೇ ಅಲೆಯ ಸಂದರ್ಭದಲ್ಲಿನ ನಿರ್ಲಕ್ಷ್ಯವನ್ನೇ 3ನೇ ಅಲೆಯ ವಿಚಾರದಲ್ಲೂ ಮುಂದುವರೆಸಿದೆ. ಹಲವು ತಜ್ಞರು, ಸಮಿತಿಗಳು ಎಚ್ಚರಿಸಿದರೂ ಬೆಡ್ ಹೆಚ್ಚಿಸಲು, ಆಕ್ಸಿಜನ್ ವ್ಯವಸ್ಥೆ ಸನ್ನದ್ಧಗೊಳಿಸಲು ಲಕ್ಷ್ಯ ವಹಿಸುತ್ತಿಲ್ಲ. ಸರ್ಕಾರದ ಈ ಬೇಜವಾಬ್ದಾರಿತನ ಜನರನ್ನು ಮತ್ತೊಮ್ಮೆ ದುರಂತಕ್ಕೆ ತಳ್ಳಲಿದೆ" ಎಂದು ಹೇಳಿದೆ.