ಹೊಸಪೇಟೆ, ಆ 31 (DaijiworldNews/PY): "ರಾಷ್ಟ್ರೀಯ ಸ್ವಯಂ ಸಂಘದಿಂದ ಗೋಹತ್ಯೆ ನಿಷೇಧ ಕಾಯ್ದೆ ತರುವುದಕ್ಕೆ ಯಾವುದೇ ಒತ್ತಡ ಇರಲಿಲ್ಲ" ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಮಂಗಳವಾರ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗೋಹತ್ಯೆ ನಿಷೇಧ ಮಾಡಬೇಕು ಎನ್ನುವುದು ಬಹುವರ್ಷಗಳ ಬೇಡಿಕೆಯಾಗಿದ್ದು, ಅದಕ್ಕೆ ಸರ್ಕಾರ ಸ್ಪಂದಿಸಿ, ಕಠಿಣ ಕಾನೂನು ಜಾರಿಗೆ ಮಾಡಿದೆ. ಗೋವುಗಳು ಕಸಾಯಿಖಾನೆಗೆ ಹೋಗದಂತೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಾಗಿದೆ. ಪಶು ಸಂಗೋಪನಾ ವೈದ್ಯರು ಸಹ ಪೊಲೀಸರ ಜೊತೆ ಕೆಲಸ ಮಾಡುತ್ತಿದ್ದಾರೆ. ಗೋಶಾಲೆ ಸ್ಥಾಪನೆಗೆ ಪ್ರತಿ ಜಿಲ್ಲೆಗೆ ತಲಾ 50 ಲಕ್ಷ ರೂ. ಮಂಜೂರಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
"ಗೋಹತ್ಯೆ ನಿಷೇಧದ ನಂತರ ಪ್ರಾಣಿ ಸಂಗ್ರಹಾಲಯಗಳಲ್ಲಿ ಪ್ರಾಣಿಗಳಿಗೆ ಕುರಿ, ಕೋಳಿ ಮಾಂಸ ನೀಡಲಾಗುತ್ತಿದ್ದು, ಅದಕ್ಕೆ ಅವುಗಳು ಹೊಂದಿಕೊಂಡಿಲ್ಲ ಎನ್ನುವ ಬಗ್ಗೆ ಜೂನ್ನಿಂದ ದೂರುಗಳು ಬಂದಿಲ್ಲ. ಆದರೆ, 13 ವರ್ಷದ ಕೋಣದ ಮಾಂಸ ಕೊಡಲು ಅವಕಾಶವಿದೆ. ಅನ್ಯ ರಾಜ್ಯಗಳಿಂದ ಗೋಮಾಂಸ ರಫ್ತು ಮಾಡುವುದರ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ರಾಜ್ಯದ ಬಗ್ಗೆ ಮಾತ್ರ ಮಾತನಾಡುತ್ತೇನೆ" ಎಂದಿದ್ದಾರೆ.