ಹುಬ್ಬಳ್ಳಿ, ಆ 31 (DaijiworldNews/PY): "ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹತ್ತು ವರ್ಷ ಆಡಳಿತ ನಡೆಸಿದ್ದರೂ ಕೂಡಾ ಅವಳಿನಗರಗಳ ಅಭಿವೃದ್ದಿಯಾಗಿಲ್ಲ. ಬಿಜೆಪಿಯೇ ಇದರ ವೈಫಲ್ಯದ ಸಂಪೂರ್ಣ ಹೊಣೆ ಹೊರಬೇಕಾಗಿದ್ದು, ಬಿಜೆಪಿಗೆ ಜನರ ಬಳಿ ಮತ ಕೇಳುವ ನೈತಿಕ ಹಕ್ಕು ಇಲ್ಲ" ಎಂದು ಕಾಂಗ್ರೆಸ್ ಶಾಸಕ ಹೆಚ್.ಕೆ ಪಾಟೀಲ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ಕೊರೊನಾ ಕಾರಣದಿಂದ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಬಡವರು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ತೈಲ ಬೆಲೆ, ಅಡುಗೆ ಅನಿಲ ಬೆಲೆ ಏರಿಕೆ ಮಾಡಿ, ಬಡವರ ಬದುಕಿನ ಮೇಲೆ ಬರೆ ಎಳೆದಿದೆ. ಈ ನಡುವೆ ಬಡವರಿಗೆ ಪಡಿತರದ ಮೂಲಕ ನೀಡುತ್ತಿರುವ ಅಕ್ಕಿ ಪ್ರಮಾಣ ಕೂಡಾ ಕಡಿಮೆ ಮಾಡಿತು. ಕೇಂದ್ರ ಸರ್ಕಾರ ಅವರ ಬದುಕನ್ನೇ ನಿರ್ನಾಮ ಮಾಡಲು ಹೊರಟಿದೆ" ಎಂದು ದೂರಿದ್ದಾರೆ.
"ಕೇಂದ್ರ ಸರ್ಕಾರ, ಸರ್ಕಾರದ ಆಸ್ತಿಯಾದ ಕ್ರೀಡಾಂಗಣ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಂದರು ಹಾಗೂ ಅದಿರು ಗಣಿ ಹೀಗೆ ಪ್ರತಿಯೊಂದನ್ನು ನಿರ್ವಹಣೆಯ ಹೆಸರಿನಲ್ಲಿ ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಇದು ಜನರ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವಾಗಿದ್ದುಮ ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉತ್ತರಿಸಬೇಕು" ಎಂದಿದ್ದಾರೆ.