ಲಕ್ನೋ, ಆ 31 (DaijiworldNews/PY): ಮಥುರಾದಲ್ಲಿ ಮದ್ಯ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಲಕ್ನೋದಲ್ಲಿ ಮಾತನಾಡಿದ ಅವರು, "ಮಥುರಾದಲ್ಲಿ ಮದ್ಯ ಹಾಗೂ ಮಾಂಸ ನಿಷೇಧಕ್ಕೆ ಯೋಜನೆಗಳನ್ನು ರೂಪಿಸಲು ಹಾಗೂ ಇತರ ಕೆಲವು ವ್ಯಾಪಾರಗಳಲ್ಲಿ ಅಂತಹ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಗೆ ನಿರ್ದೇಶನ ನೀಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ" ಎಂದಿದ್ದಾರೆ.
"ಮದ್ಯ ಹಾಗೂ ಮಾಂಸ ವ್ಯಾಪಾರದಲ್ಲಿ ತೊಡಗಿರುವವರು ಮಥುರಾದ ವೈಭವವನ್ನು ಮರುಕಳಿಸುವ ಸಲುವಾಗಿ ಹಾಲಿನ ಮಾರಾಟ ಮಾಡಬಹುದು" ಎಂದು ತಿಳಿಸಿದ್ದಾರೆ.
"ಭೂಮಿಯನ್ನು ಅಭಿವೃದ್ದಿಪಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಹಾಗೂ ಇದಕ್ಕೆ ಯಾವುದೇ ಹಣದ ಕೊರತೆ ಇಲ್ಲ. ಈ ಪ್ರದೇಶದ ಅಭಿವೃದ್ದಿಗೆ ಆಧುನಿಕ ತಂತ್ರಜ್ಞಾನ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯ ಮಿಶ್ರಣವನ್ನು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ.