ಬೆಂಗಳೂರು, ಆ 31 (DaijiworldNews/PY): "ರಾಜ್ಯಕ್ಕೆ ಕೇರಳದಿಂದ ಆಗಮಿಸುವವರಿಗೆ ಒಂದು ವಾರ ಕಡ್ಡಾಯವಾಗಿ ಸಾಂಸ್ಥಿತ ಕ್ವಾರಂಟೈನ್ ಮಾಡಲಾಗುವುದು" ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆ ಗಡಿ ಭಾಗಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.
"ಕೇರಳ ಗಡಿ ಭಾಗಗಳಲ್ಲಿ ರಾಜ್ಯಕ್ಕೆ ಬರುವವರಿಗೆ ಕಡ್ಡಾಯವಾಗಿ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಅದೇ ರೀತಿಯಾಗಿ ವಿಮಾನ ನಿಲ್ದಾಣದ ಮೂಲಕ ಬರುವವರಿಗೂ ಕೂಡಾ ಒಂದು ವಾರ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.
"ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಬಂಧಪಟ್ಟಂತೆ ಸಿಎಂ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ" ಎಂದು ತಿಳಿಸಿದ್ದಾರೆ.
"ಕೇರಳದಿಂದ ಬರುವವರು ಕೊರೊನಾ ಲಸಿಕೆ ಪಡೆದಿದ್ದು, ಆರ್ಟಿಪಿಸಿಆರ್ ನೆಗೆಟಿವ್ ವರದಿ ಇದ್ದರೂ ಸಹ ಒಂದು ವಾರ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು. ಬಳಿಕ ನೆಗೆಟಿವ್ ವರದಿ ಬಂದಲ್ಲಿ ಮಾತ್ರವೇ ರಾಜ್ಯದೊಳಗೆ ಪ್ರವೇಶ ಮಾಡಲು ಅವಕಾಶ ಕಲ್ಪಿಸಲಾಗುವುದು" ಎಂದಿದ್ದಾರೆ.