ಬೆಂಗಳೂರು, ಆ.31 (DaijiworldNews/HR): ಸೋಮವಾರ ತಡರಾತ್ರಿ ಕೋರಮಂಗಲದಲ್ಲಿ ಭೀಕರ ಕಾರು ಅಪಘಾತ ಸಂಭವಿಸಿದ್ದು, ತಮಿಳುನಾಡಿನ ಹೊಸೂರು ಶಾಸಕ ವೈ ಪ್ರಕಾಶ್ ಅವರ ಪುತ್ರ, ಭಾವಿ ಸೊಸೆ ಸೇರಿ ಒಟ್ಟು ಏಳು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟವರನ್ನು ಹೊಸೂರು ಶಾಸಕ ವೈ.ಪ್ರಕಾಶ್ ಅವರ ಪುತ್ರ ಕರುಣಾಸಾಗರ್, ಭಾವಿ ಸೊಸೆ ಬಿಂದೂ(28), ಇಶಿತಾ (21), ಡಾ. ಧನುಶಾ (21), ಕೇರಳದ ಅಕ್ಷಯ್ ಗೋಯಲ್, ಹರಿಯಾಣದ ಉತ್ಸವ ಹಾಗೂ ಹುಬ್ಬಳ್ಳಿಯ ರೋಹಿತ್ (23) ಎಂದು ಗುರುತಿಸಲಾಗಿದೆ.
ಮಂಗಳ ಕಲ್ಯಾಣ ಮಂಟಪ ಸಮೀಪದಲ್ಲಿ ಅತೀ ವೇಗವಾಗಿದ್ದ ಆಡಿ ಕ್ಯೂ3 ಕಾರು, ಚಾಲಕನ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗಕ್ಕೆ ನುಗ್ಗಿ ವಿದ್ಯುತ್ ಕಂಬಕ್ಕೆ ಗುದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಆಡಿಗೋಡಿ ಸಂಚಾರ ಪೊಲೀಸರು ತಿಳಿಸಿದರು.
ಇನ್ನು ಅಪಘಾತದಿಂದ ಕಾರು ನಜ್ಜುಗುಜ್ಜಾಗಿದ್ದು, ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಮೂವರು ಹಾಗೂ ಹಿಂದೆ ಕುಳಿತಿದ್ದ ನಾಲ್ವರು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.