ಬೆಂಗಳೂರು, ಆ. 30 (DaijiworldNews/HR): ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಶೇ.2ಕ್ಕಿಂತ ಕಡಿಮೆ ಇರುವಂತ ಪಾಸಿಟಿವಿಟಿ ದರ ಆಧರಿಸಿ, ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣ ಕ್ರಮಗಳನ್ನು ಅನುಸರಿ 6 ರಿಂದ 8ನೇ ತರಗತಿಗಳನ್ನು ಸೆಪ್ಟೆಂಬರ್ 6ರಿಂದ ಆರಂಭಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಈ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ನಡೆದ ತಾಂತ್ರಿಕ ತಜ್ಞರ ಸಭೆಯ ಬಳಿಕ ಸಭೆಯ ನಿರ್ಧಾರಗಳನ್ನು ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು, "ಶನಿವಾರ ಮತ್ತು ಭಾನುವಾರ ಹೊರತುಪಡಿಸಿ, ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆ ಇರುವಂತ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 6 ರಿಂದ 6 ರಿಂದ 8ನೇ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಬ್ಯಾಚ್ ಮಾದರಿಯಲ್ಲಿ 6 ರಿಂದ 8ನೇ ತರಗತಿ ಶಾಲೆಗಳು ನಡೆಯಲಿವೆ" ಎಂದರು.
ಇನ್ನು ಸೋಮವಾರದಿಂದ ಶುಕ್ರವಾರದವರೆಗೆ ಶಾಲೆಗಳನ್ನು ನಡೆಸಲಾಗುತ್ತದೆ. ಶನಿವಾರ ಮತ್ತು ಭಾನುವಾರ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಕೇರಳದಿಂದ ಬರುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದ್ದು, ಶೇ.50ರಷ್ಟು ಮಕ್ಕಳು ಮಾತ್ರ ಶಾಲೆಗ ಹಾಜರಾಗಬೇಕು. ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವಂತ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸೋದಕ್ಕೆ ಅನುಮತಿ ಇಲ್ಲ" ಎಂದು ಹೇಳಿದ್ದಾರೆ.