ಬೆಂಗಳೂರು, ಆ. 30 (DaijiworldNews/HR): ಪ್ರತಿ ಬುಧವಾರ ಇನ್ನು ವಿಶೇಷ ಲಸಿಕಾ ಉತ್ಸವ ನಡೆಸಿ ಸುಮಾರು 10 ಲಕ್ಷ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆಗಸ್ಟ್ ತಿಂಗಳಲ್ಲೇ 1.10 ಕೋಟಿ ಲಸಿಕೆ ಕೇಂದ್ರ ಸರ್ಕಾರದಿಂದ ಬಂದಿದ್ದು, ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರದ ಮಟ್ಟದಲ್ಲಿ ಚರ್ಚಿಸಿದ ಬಳಿಕ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಇನ್ನು ಮುಂದೆ ಪ್ರತಿ ದಿನ 5 ಲಕ್ಷ ಲಸಿಕೆ ನೀಡಲಾಗುವುದು" ಎಂದರು.
ಇನ್ನು "ವಾರದಲ್ಲಿ ಒಂದು ದಿನ ಬುಧವಾರ ಲಸಿಕಾ ಉತ್ಸವ ನಡೆಸಿ ಈ ಪ್ರಮಾಣವನ್ನು 5 ದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು. ಇದರಿಂದ ಒಂದೂವರೆಯಿಂದ ಎರಡು ಕೋಟಿ ಲಸಿಕೆಯನ್ನು ಒಂದು ತಿಂಗಳಲ್ಲಿ ನೀಡಬಹುದು. ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂರ್ಣಗೊಂಡ ನಗರ ಬೆಂಗಳೂರು ಆಗಬೇಕು ಎಂಬ ಗುರಿ ಇದೆ" ಎಂದಿದ್ದಾರೆ.
ಇಡೀ ರಾಜ್ಯದಲ್ಲಿ 4 ಕೋಟಿ ಲಸಿಕೆ ನೀಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಲಸಿಕೆ ನೀಡಲಾಗಿದೆ. ಬೀದರ್, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುವುದು" ಎಮ್ದು ತಿಳಿಸಿದ್ದಾರೆ.