ಬೆಂಗಳೂರು, ಆ 30 (DaijiworldNews/PY): "ಕಾಂಗ್ರೆಸ್ ಮಂಜೂರು ಮಾಡಿದ್ದ ಹಲವು ಅಭಿವೃದ್ಧಿಪರ ಯೋಜನೆಗಳನ್ನು ಎತ್ತಂಗಡಿ ಮಾಡಿ ದ್ರೋಹ ಬಗೆದಿದ್ದೇ ಬಿಜೆಪಿ ಸಾಧನೆ" ಎಂದು ಕಾಂಗ್ರೆಸ್ ಬಿಜೆಪಿ ವಿರುದ್ದ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಹೀಗಿದ್ದೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ದ್ರೋಹ ಬಗೆದ ಬಿಜೆಪಿ ಕಲ್ಬುರ್ಗಿ ಪಾಲಿಕೆ ಚುನಾವಣೆಯಲ್ಲಿ ಯಾವ ಮುಖದೊಂದಿಗೆ ಮತ ಕೇಳುತ್ತದೆ?! ಕಾಂಗ್ರೆಸ್ ಮಂಜೂರು ಮಾಡಿದ್ದ ಹಲವು ಅಭಿವೃದ್ಧಿಪರ ಯೋಜನೆಗಳನ್ನು ಎತ್ತಂಗಡಿ ಮಾಡಿ ದ್ರೋಹ ಬಗೆದಿದ್ದೇ ಬಿಜೆಪಿ ಸಾಧನೆ" ಎಂದಿದೆ.
"ಬೆಳಗಾವಿ ಜನತೆ ಬಿಜೆಪಿಯನ್ನ ಆಯ್ಕೆ ಮಾಡಿದರೂ ಬಿಜೆಪಿಯಿಂದ ಬೆಳಗಾವಿಗೆ ಸಿಕ್ಕ ಕೊಡುಗೆ ಶೂನ್ಯ. ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ, ಸಂಸದರೂ ಬಿಜೆಪಿ, ಹಲವು ಶಾಸಕರೂ ಬಿಜೆಪಿ. ಹೀಗಿದ್ದೂ ಬೆಳಗಾವಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಬಿಜೆಪಿ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಜನರ ಮತ ಕೇಳುವುದಕ್ಕೆ ನಾಚಿಕೆಯಾಗಬೇಕು!" ಎಂದು ಹೇಳಿದೆ.
"ಸಂವಿಧಾನದ 15 ನೇ ಹಾಗೂ 25ನೇ ಪರಿಚ್ಛೇದದ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯದ ನಿಷೇಧ. ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಆಚರಣೆ ಮತ್ತು ಧರ್ಮಾಚರಣೆಯ ಸ್ವತಂತ್ರವಿದೆ. ಆದರೆ ದೇಶದಲ್ಲಿ ಇವೆರೆಡರ ಉಲ್ಲಂಘನೆಯೂ ಆಗುತ್ತಿದೆ. ಬಿಜೆಪಿ ಈ ಪರಿಚ್ಚೇದಗಳನ್ನೂ ಮಾರಿಕೊಂಡಿದೆಯೇ?!" ಎಂದು ಪ್ರಶ್ನಿಸಿದೆ.