ಬೆಳಗಾವಿ, ಆ 30 (DaijiworldNews/PY): "ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೊಳಗಾದ ಸಂದರ್ಭ ಜನರ ಸಮಸ್ಯೆ ಆಲಿಸಲು ಬಾರದ ಬಿಜೆಪಿ ಜನಪ್ರತಿನಿಧಿಗಳು ಈಗ ಚುನಾವಣಾ ಪ್ರಚಾರಕ್ಕೆ ಎಲ್ಲರೂ ಓಡೋಡಿ ಬಂದಿದ್ದಾರೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಿಡಿಕಾರಿದ್ದಾರೆ.
ನಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರವಾಹದ ವೇಳೆ ಜಿಲ್ಲೆಯಲ್ಲಿ ನಾಲ್ಕು ಸಚಿವರಿದ್ದರೂ ಕೂಡಾ ಒಂದು ಸಭೆ ನಡೆಸಲಿಲ್ಲ. ಜನರ ಸಮಸ್ಯೆ ಆಲಿಸಿ ಅವರಿಗೆ ಪರಿಹಾರ ನೀಡುವ ಯತ್ನ ಮಾಡಲಿಲ್ಲ. ಎಲ್ಲವನ್ನೂ ಜನರು ಗಮನಿಸುತ್ತಿದ್ದು, ಜನರು ಪಾಲಿಕೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ" ಎಂದು ತಿಳಿಸಿದ್ದಾರೆ.
"ನಗರದಲ್ಲಿರುವ ಯಡಿಯೂರಪ್ಪ ಅವರ ಕಾಮಗಾರಿಗೆ ಅರ್ಧಕ್ಕೆ ನಿಂತಿರುವುದನ್ನು ನಾವು ಪೂರ್ಣಗೊಳಿಸಿದ್ದು. ಅಲ್ಲಿ ಬಿಜೆಪಿಯವರು ಯಡಿಯೂರಪ್ಪ ಅವರ ಮಾರ್ಗ ಎಂದು ಕೈಯಿಂದ ಬರೆದು ಬೋರ್ಡ್ ಹಾಕಿದ್ದರು" ಎಂದು ಟೀಕಿಸಿದ್ದಾರೆ.
"ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಇದ್ದ ಸಂದರ್ಭ ಬೆಳಗಾವಿಯಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದೇವೆ. ನಾನು ಉಸ್ತುವಾರಿ ಸಚಿವನಾಗಿದ್ದ ಸಂದರ್ಭ ಆಗಿನ ಶಾಸಕ ಫಿರೋಜ್ ಸೇಠ್ ಅವರ ಅವರೊಂದಿಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ" ಎಂದು ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ, "ಉಚಿತ ಶವಸಂಸ್ಕಾರ ಎಂದರೆ ಏನರ್ಥ? ಬಿಜೆಪಿಗರು ಜನರ ಸಾವನ್ನೇ ಬಯಸುತ್ತಿದ್ದಾರಾ?" ಎಂದು ಕೇಳಿದ್ದಾರೆ.
"ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಗರು ಪ್ರಶ್ನಿಸುತ್ತಿದ್ದಾರೆ. ದೇಶದಲ್ಲಿರುವ ರೈಲು ನಿಲ್ದಾಣ ಸೇರಿದಂತೆ ವಿಮಾನ ನಿಲ್ದಾಣಗಳು, ದೊಡ್ಡ ಡ್ಯಾಂಗಳ ನಿರ್ಮಾಣ ಮಾಡಿದ್ದು ಯಾರು?" ಎಂದು ಪ್ರಶ್ನಿಸಿದ್ದಾರೆ.