ಕಲಬುರ್ಗಿ, ಆ 30 (DaijiworldNews/PY): "ಜೆಡಿಎಸ್ ತೆರೆದ ಬಾಗಿಲು ಇದ್ದಂತೆ, ಬರುವವರು ಬರಲಿ ಹೋಗುವವರು ಹೋಗಲಿ" ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಪಾಲಿಕೆ ಚುನಾವಣೆಯ ಪ್ರಚಾರಕ್ಕೆ ಬಂದಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜಿ ಟಿ ದೇವೇಗೌಡ ಅವರು ಜೆಡಿಎಸ್ ಸೇರುವ ಕುರಿತು ತಮ್ಮ ತೀರ್ಮಾನವನ್ನು ತಿಳಿಸಿದ್ದಾರೆ. ಆ ಕುರಿತು ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ನಮ್ಮ ಕಾರ್ಯಕರ್ತರನ್ನು ನಂಬಿ ನಾನು ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಮುಖಂರನ್ನು ಕರೆತರಲು ನಾವು ಬೇರೆ ಪಕ್ಷದ ಮುಖಂಡರ ಮನೆ ಬಳಿ ನಿಂತಿಲ್ಲ. ಆ ಕೆಲಸವನ್ನು ಬಿಜೆಪಿ, ಕಾಂಗ್ರೆಸ್ನವರೇ ಮಾಡುತ್ತಿದ್ದಾ" ಎಂದಿದ್ದಾರೆ.
"20 ಜೆಡಿಎಸ್ ಅಭ್ಯರ್ಥಿಗಳು ಕಲಬುರ್ಗಿ ಮಹಾನಗರ ಪಾಲಿಕೆ ಚುನಾವಣೆಲ್ಲಿ ಗೆದ್ದಿದ್ದಾರೆ. ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರ್ಗಿ ಮಹಾನಗರ ಪಾಲಿಕೆಗಳಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಅತಂತ್ರ ಫಲಿತಾಂಶ ಬಂದಲ್ಲಿ ಮುಂದೆ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎನ್ನುವುದನ್ನು ತೀರ್ಮಾನಿಸಲಿದ್ದೇವೆ" ಎಂದು ತಿಳಿಸಿದ್ದಾರೆ.
"ನಾನು ಪಕ್ಷದ ಕಾರ್ಯಕರ್ತರು ಸರಿ ಇಲ್ಲ ಎಂದು ಹೇಳಿಲ್ಲ. ಇದನ್ನು ಮಾಧ್ಯಮಗಳು ತಿರುಚಿವೆ. ನಾನು ಬಂದು ಹೋದ ಬಳಿಕ ಕಾರ್ಯಕರ್ತರು ನಿಷ್ಕ್ರಿಯರಾಗುತ್ತಾರೆ ಎಂದು ಮುಖಂಡರು ತಿಳಿಸಿದ್ದರು. ಆ ವಿಚಾರವನ್ನೇ ನಾನು ಹೇಳಿದ್ದು" ಎಂದಿದ್ದಾರೆ.
ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವೈಫಲ್ಯ ಎದ್ದು ಕಾಣುತ್ತದೆ" ಎಂದು ಹೇಳಿದ್ದಾರೆ.