ನವದೆಹಲಿ, ಆ 30 (DaijiworldNews/MS): ಕೋವಿಡ್ -19 ಸಾಂಕ್ರಾಮಿಕ ನಮ್ಮಿಂದ ಅನೇಕ ಜೀವಗಳನ್ನು ಕಸಿದುಕೊಂಡಿದ್ದು, ಈ ಸಂದರ್ಭದಲ್ಲಿ ಪೋಷಕರು ಅಥವಾ ತಂದೆ - ತಾಯಿ ಇಬ್ಬರನ್ನು ಕಳೆದುಕೊಂಡಿರುವುದು "ಹೃದಯ ವಿದ್ರಾವಕ",ವಾಗಿದ್ದು, ಅನಾಥರಾದ ಮಕ್ಕಳ ಉಳಿವು ಅಪಾಯದಲ್ಲಿದೆ ಎಂದು ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದ್ದು. ಇದೇ ವೇಳೆ ಅನಾಥ ಮಕ್ಕಳಿಗಾಗಿ ಕೇಂದ್ರ ಮತ್ತು ರಾಜ್ಯಗಳು ಘೋಷಿಸಿದ ಯೋಜನೆಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದೆ.
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅನಾಥರಾಗಿರುವ ಅಥವಾ ಅವರ ಪೋಷಕರಲ್ಲಿ ಒಬ್ಬರನ್ನು ಕಳೆದುಕೊಂಡ ಮಕ್ಕಳನ್ನು ಗುರುತಿಸುವಲ್ಲಿ "ತೃಪ್ತಿದಾಯಕ ಪ್ರಗತಿ" ಸಾಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಅಗತ್ಯವಿರುವ ಮಕ್ಕಳಿಗೆ ನೆರವು ನೀಡುವ ಯೋಜನೆಗಳನ್ನು ಘೋಷಿಸಿರುವುದಕ್ಕೆ ನಮಗೆ ಸಂತೋಷವಾಗಿದೆ ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರ ಪೀಠ ಹೇಳಿದೆ.
ಮಕ್ಕಳ ಆಶ್ರಯ ತಾಣಗಳಲ್ಲಿ ಕೋವಿಡ್ -19 ಸಾಂಕ್ರಮಿಕ ಸೋಂಕು ಸುಮೋಟೋ ಅರ್ಜಿಯ ವಿಚಾರಣೆ ವೇಳೆ "ಭೀಕರವಾದ ಕೋವಿಡ್ -19 ನಿಂದ ಉಂಟಾದ ಭೀಕರವಾದ ದುರಂತ ಅನೇಕ ಜೀವಗಳನ್ನು ದುಸ್ತರಗೊಳಿಸಿದೆ, ವಿಶೇಷವಾಗಿ ಎಳೆ ವಯಸ್ಸಿನ ಮಕ್ಕಳು ತಮ್ಮ ಹೆತ್ತವರನ್ನು ಕಳೆದುಕೊಂಡಿದ್ದಾರೆ. ಈ ಮಕ್ಕಳ ಬದುಕು ಅಪಾಯದಲ್ಲಿದ್ದು ಇದು ನಿಜಕ್ಕೂ ಹೃದಯ ಕಲಕುವಂತಿದೆ ಎಂದು ಹೇಳಿದೆ.
ಇದೇ ವೇಳೆ ಬಾಲ ನ್ಯಾಯ ಸಮಿತಿ (ಸಿಡಬ್ಲ್ಯೂಸಿ) ಯ ವಿಚಾರಣೆಗಳು, ಬಾಲ ನ್ಯಾಯ (ಮಕ್ಕಳ ಕಾಳಜಿ ಮತ್ತು ರಕ್ಷಣೆ) ಕಾಯ್ದೆ, 2015 ರ ಅನುಸಾರವಾಗಿ, ಆರೈಕೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳನ್ನು ಗುರುತಿಸುವ ಕೆಲಸ ಮತ್ತಷ್ಟು ತ್ವರಿತಗೊಳಿಸಬೇಕು ಎಂದು ಹೇಳಿದೆ.