ನವದೆಹಲಿ, ಆ. 30 (DaijiworldNews/HR): ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಇಂದು ಭಾರತಕ್ಕೆ ಒಂದು ಚಿನ್ನ, 2 ಬೆಳ್ಳಿ, ಒಂದು ಕಂಚಿನ ಪದಕ ದೊರೆತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಅವನಿ ಲೇಖರಾ ಅವರು ಕಠಿಣ ಪರಿಶ್ರಮದಿಂದ ಮತ್ತು ಅರ್ಹವಾಗಿಯೇ ಚಿನ್ನದ ಪದಕ ಗಳಿಸಿರುವುದಕ್ಕೆ ಅಭಿನಂದನೆಗಳು. ಶೂಟಿಂಗ್ ಕುರಿತ ನಿಮ್ಮ (ಅವನಿ) ಉತ್ಸಾಹ ಮತ್ತು ಪರಿಶ್ರಮದ ಸ್ವಭಾವದಿಂದಾಗಿ ಇದು ಸಾಧ್ಯವಾಗಿದೆ. ಇದು ಭಾರತೀಯ ಕ್ರೀಡೆಗೆ ವಿಶೇಷ ಕ್ಷಣ. ನಿಮ್ಮ ಭವಿಷ್ಯದ ಸಾಧನೆಗಳಿಗೆ ಶುಭವಾಗಲಿ" ಎಂದರು.
ಇನ್ನು "ಯೋಗೇಶ್ ಕಥೂನಿಯಾ ಅವರಿಂದ ಅದ್ಭುತ ಪ್ರದರ್ಶನವಾಗಿದ್ದು, ಅವರು ಬೆಳ್ಳಿ ಪದಕ ಜಯಿಸಿರುವುದು ಸಂತಸ ತಂದಿದೆ. ಅವರ ಅನುಸರಣೀಯ ಯಶಸ್ಸು ಮುಂದಿನ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿದ್ದು, ಅಭಿನಂದನೆಗಳು" ಎಂದಿದ್ದಾರೆ.
"ದೇವೇಂದ್ರ ಝಝಾರಿಯಾ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದು, ನಮ್ಮ ಅನುಭವಿ ಕ್ರೀಡಾಪಟುಗಳಲ್ಲಿ ಒಬ್ಬರಾದ ಅವರೂ ಬೆಳ್ಳಿ ಪದಕ ಜಯಿಸಿದ್ದಾರೆ. ದೇವೇಂದ್ರ ಅವರು ಭಾರತವು ನಿರಂತರವಾಗಿ ಹೆಮ್ಮೆಪಡುವಂತೆ ಮಾಡುತ್ತಿದ್ದಾರೆ. ಅವರಿಗೆ ಅಭಿನಂದನೆಗಳು" ಎಂದು ಶುಭ ಹಾರೈಸಿದ್ದಾರೆ.
ಇನ್ನು "ಸುಂದರ್ ಸಿಂಗ್ ಗುರ್ಜರ್ ಅವರು ಕಂಚಿನ ಪದಕ ಗೆದ್ದಿರುವುದು ದೇಶಕ್ಕೆ ಸಂತಸ ನೀಡಿದ್ದು, ಅವರು ಧೈರ್ಯ ಮತ್ತು ಸಮರ್ಪಣಾ ಮನೋಭಾವವನ್ನು ತೋರಿದ್ದಾರೆ. ಅವರಿಗೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ.