ಕೋಲ್ಕತ್ತಾ, ಆ 30 (DaijiworldNews/MS): ಕೋವಿಡ್ ಸೋಂಕು ತಗುಲಿದ ನಂತರ ಕಾಣಿಸಿಕೊಂಡ ಸಮಸ್ಯೆಗಳಿಂದ ಬಳಲುತ್ತಿದ್ದ ಪ್ರಸಿದ್ಧ ಬಂಗಾಳಿ ಲೇಖಕ ಬುದ್ಧದೇವ್ ಗುಹಾ ಅವರು(85) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ 11.25ಕ್ಕೆ ಹೃದಯಾಘಾತದಿಂದ ನಿಧನರಾದರು' ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ಅವರಿಗೆ ಕೋವಿಡ್-ತಗುಲಿದ ಬಳಿಕ ಅವರು 33 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆದರೆ ಮತ್ತೆ ಈ ತಿಂಗಳ ಆರಂಭದಲ್ಲಿ ಉಸಿರಾಟದ ತೊಂದರೆ ಮತ್ತು ಮೂತ್ರಕೋಶ ಸೋಂಕು ಕಾಣಿಸಿಕೊಂಡ ಕಾರಣ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈಶಾನ್ಯ ಭಾರತದ ಆರಣ್ಯ ಸಂಪತ್ತು ಮತ್ತು ಪ್ರಕೃತಿಯ ಛಾಯೆ ಗುಹಾ ಅವರ ಬರಹದಲ್ಲಿ ಎದ್ದು ಕಾಣುತ್ತಿತ್ತು. ಅವರ 'ಮಧುಕರಿ' ಕೃತಿ ಗುಹಾ ಬಹಳ ಖ್ಯಾತಿ ತಂದುಕೊಟ್ಟಿತ್ತು. ಅವರ ಕಾದಂಬರಿಗಳು ಮತ್ತು ಸಣ್ಣಕತೆಗಳು ಕೂಡ ಜನಪ್ರಿಯವಾಗಿವೆ. ಅವರು ಆನಂದ್ ಪುರಸ್ಕಾರ್, ಶಿರೋಮನ್ ಪುರಸ್ಕಾರ್ ಮತ್ತು ಶರತ್ ಪುರಸ್ಕಾರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಗುಹಾ ಪತ್ನಿ ಖ್ಯಾತ ಸಂಗೀತ ನಿರೂಪಕಿ ರೀತೂ ಗುಹಾ 2011ರಲ್ಲಿ ನಿಧರಾಗಿದ್ದರು. ಗುಹಾ ಅವರು ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ