ಲಕ್ನೋ, ಆ. 30 (DaijiworldNews/HR): ಪಶ್ಚಿಮ ಉತ್ತರ ಪ್ರದೇಶದಲ್ಲಿ ನಿಗೂಢ ವೈರಲ್ ಜ್ವರದ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ಕಂಡುಬರುತ್ತಿದ್ದು, ಈಗಾಗಲೇ ಅನೇಕ ಮಂದಿಯನ್ನು ಬಲಿಪಡೆದುಕೊಂಡಿದೆ.
ಆರೋಗ್ಯ ಇಲಾಖೆಯ ವರದಿಗಳ ಪ್ರಕಾರ, ಕಳೆದ ಏಳು ದಿನಗಳಲ್ಲಿ ಆಗ್ರಾ, ಫಿರೋಜಾಬಾದ್, ಮಥುರಾ, ಮೈನ್ ಪುರಿ, ಎತಾ ಮತ್ತು ಕಾಸ್ ಗಂಜ್ ಜಿಲ್ಲೆಗಳಲ್ಲಿ ಸಾವುಗಳು ವರದಿಯಾಗಿವೆ.
ಈ ತೀವ್ರ ನಿಗೂಢ ಜ್ವರದ ಸಮಯದಲ್ಲಿ, ರೋಗಿಯು ಹೆಚ್ಚಿನ ನಿರ್ಜಲೀಕರಣ ಹೊಂದುತ್ತಾನೆ ಮತ್ತು ಪ್ಲೇಟ್ಲೆಟ್ ಎಣಿಕೆಯಲ್ಲಿ ಹಠಾತ್ ಕುಸಿತ ಕಾಣುತ್ತದೆ. ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯೊಂದಿಗೆ ಸರ್ಕಾರಿ ಆಸ್ಪತ್ರೆಗಳು ಹಾಸಿಗೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಇನ್ನು ಗೌತಮ್ ಬುದ್ಧ ನಗರ ಆಡಳಿತವು ಆಗಸ್ಟ್ 26 ಹೈ ಅಲರ್ಟ್ ಘೋಷಿಸಿದ್ದು, ತೀವ್ರ ಜ್ವರ ಹೊಂದಿರುವ ರೋಗಿಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ತನ್ನ ಆರೋಗ್ಯ ಕಾರ್ಯಕರ್ತರಿಗೆ ತಿಳಿಸಿದೆ.
ಈ ವೈರಲ್ ಜ್ವರವು ಮಾರಣಾಂತಿಕವಾಗಿದ್ದು, ಜನರು ಚೇತರಿಸಿಕೊಳ್ಳಲು 12 ದಿನಗಳಿಗಿಂತ ಹೆಚ್ಚು ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.