ಬೆಂಗಳೂರು, ಆ 30 (DaijiworldNews/MS): ರಾಜ್ಯ ಸರಕಾರವು ಕೊರೊನಾ ಮಹಾಮಾರಿಯ 3ನೇ ಅಲೆಯ ಭೀತಿಯ ಕಾರಣವನ್ನು ನೀಡಿ, ಸಾರ್ವಜನಿಕ ಗಣೇಶೋತ್ಸವದ ಆಚರಣೆಯ ಮೇಲೆ ಕೊನೆಯ ಕ್ಷಣದಲ್ಲಿ ರಾಜ್ಯಾದ್ಯಂತ ನಿಷೇಧವನ್ನು ಹೇರಿರುವುದು ಅನೇಕ ಗಣೇಶೋತ್ಸವ ಮಂಡಳಿಗಳು, ಹಿಂದೂ ನಾಯಕರು ಮತ್ತು ಸ್ವತಃ ಆಡಳಿತ ಪಕ್ಷದ ಶಾಸಕರು ಸಹ ಆಕ್ಷೇಪಕ್ಕೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ 'ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಸೋಮವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ಹಮ್ಮಿಕೊಳ್ಳಲಾಗಿದೆ.
ಜತೆಗೆ ತೀವ್ರ ಪರ ವಿರೋಧ ವ್ಯಕ್ತ ವಾಗುತ್ತಿರುವ ಗೌರಿ - ಗಣೇಶ ಆಚರಣೆ ವೇಳೆ ಸಾರ್ವಜನಿಕ ಉತ್ಸವಗಳಿಗಳಿಗೆ ಅವಕಾಶ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜತೆಗೆ ರಾತ್ರಿ ಕರ್ಫ್ಯೂ ಹಾಗೂ ಸೋಂಕು ಹೆಚ್ಚಿರುವ ಆಯ್ದ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂನಂತಹ ಕಠಿಣ ಕ್ರಮಗಳನ್ನು ಮುಂದುವರೆಸುವ ಸಾಧ್ಯತೆ ಇದೆ. ಜತೆಗೆ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧಗಳನ್ನು ಕೈಗೊಳ್ಳಲು ಸ್ಥಳೀಯ ಜಿಲ್ಲಾಡಳಿತಗಳಿಗೆ ಅಧಿಕಾರ ನೀಡುವ ಸಾಧ್ಯತೆ ಇದೆ.
ನೆರೆಯ ಕೇರಳದಲ್ಲಿ ಕೊರೋನಾ ಸೋಂಕು ಪ್ರಕರಣ ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಗಳಿಗೂ ಪತ್ರ ಬರೆದಿದೆ. ಈ ಹಂತದಲ್ಲಿ ಸಾಮೂಹಿಕವಾಗಿ ಜನ ಸೇರುವುದನ್ನು ನಿಯಂತ್ರಿಸದಿದ್ದರೆ ರಾಜ್ಯದಲ್ಲೂ ಮೂರನೇ ಅಲೆ ಆರಂಭವಾಗಬಹುದು.
ಜತೆಗೆ ಸಾಲು-ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ರಾಜ್ಯಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಕಾರ್ಯದರ್ಶಿಗಳು ಶನಿವಾರ ಎಲ್ಲಾ ರಾಜ್ಯ ಗಳಿಗೂ ಪತ್ರ ಬರೆದು ಎಚ್ಚರಿಸಿದ್ದಾರೆ.