ಚೆನ್ನೈ, ಆ 29 (DaijiworldNews/PY): "ದೇಶದ ಭದ್ರತೆಗೆ ಜಾಗತೀಕರಣ ಬೆದರಿಕೆ ಒಡ್ಡುತ್ತಿದೆ. ಈ ರೀತಿಯಾದ ಸವಾಲುಗಳನ್ನು ಎದುರಿಸಲು ಸನ್ನದ್ಧತೆ ಅವಶ್ಯಕ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಊಟಿ ಬಳಿಯ ವೆಲ್ಲಿಂಗ್ಟನ್ನಲ್ಲಿರುವ ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ. ನಮ್ಮ ಭದ್ರತಾ ಪಡೆಗಳು ಈ ಸುದೀರ್ಘ ಅವಧಿಯಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿ ನಿಂತಿವೆ" ಎಂದು ತಿಳಿಸಿದ್ದಾರೆ.
"ಸಂವಹನ ಸೇರಿದಂತೆ ವ್ಯಾಪಾರ, ವಿದ್ಯುತ್,ಮಿಲಿಟರಿ ಕ್ಷೇತ್ರಗಳಲ್ಲಿ, ಆರ್ಥಿಕ ಹಾಗೂ ರಾಜಕೀಯ ಸಮೀಕರಣದಲ್ಲಿ ಜಾಗತೀಕರಣದಿಂದಾಗಿ ಬದಲಾವಣೆಯಾಗಿವೆ. ಪ್ರತೀ ದೇಶದ ಭದ್ರತೆಗೆ ಈ ಬದಲಾವಣೆಗಳೇ ಸವಾಲೊಡ್ಡುತ್ತಿವೆ" ಎಂದಿದ್ದಾರೆ.
"ದೇಶಕ್ಕೆ ಸ್ಯಾತಂತ್ರ್ಯ ಸಿಕ್ಕಿದ ದಿನದಂದಲೂ ಕೆಲವು ಶತ್ರು ರಾಷ್ಟ್ರಗಳು ಪರಿಸ್ಥತಿ ಲಾಭ ಪಡೆದು ದೇಶದಲ್ಲಿ ಅಸ್ಥಿರತೆ ಉಂಟುಮಾಡಲು ನೋಡುತ್ತಲೇ ಇವೆ. ನಮ್ಮ ರಕ್ಷಣಾ ಪಡೆಗಳು ಇಂತಹ ಪ್ರಯತ್ನಗಳಿಗೆ ದಿಟ್ಟವಾದ ಉತ್ತರ ನೀಡಿವೆ" ಎಂದು ತಿಳಿಸಿದ್ದಾರೆ.