ಹುಬ್ಬಳ್ಳಿ, ಆ 29 (DaijiworldNews/PY): "ರಾಜೀನಾಮೆ ನೀಡುವ ಸಂದರ್ಭ ಯಡಿಯೂರಪ್ಪ ಅವರು ಗದ್ಗದಿತರಾಗಿ ಕಣ್ಣೀರಿಟ್ಟಿದ್ದರು. ಇದಕ್ಕೆ ಕಾರಣ ಏನು ಎನ್ನುವುದು ನನಗೆ ತಿಳಿದಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, "ಕೊರೊನಾ ಸಮಯದಲ್ಲಿ ಆಕ್ಸಿಜನ್, ಬೆಡ್ ನಿರ್ವಹಣೆಗಳ ವಿಚಾರದಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ಹಗರಣ ನಡೆದಿದೆ. ಕೊರೊನಾ ಕಾರಣದಿಂದ ಸಂಕಷ್ಟಕ್ಕೊಳಗಾದ ಮಂದಿ ಆಸ್ಪತ್ರೆ, ಆಂಬ್ಯುಲೆನ್ಸ್ಗಳಿಗಾಗಿ ಬೀದಿ ಬೀದಿ ಸರತಿ ಸಾಲು ನಿಂತಿದ್ದಾರೆ. ಈ ವಿಚಾರದ ಬಗ್ಗೆ ಶಾಸಕ ಅರವಿಂದ್ ಬೆಲ್ಲದ್ ಅವರೇ ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಹೇಳಿರುವ ಮಾತನ್ನು ನಂಬಬೇಕು ಅಲ್ಲವೇ?. ಈ ಕಾರಣಕ್ಕಾಗಿ ಸಿಎಂ ಬದಲಾವಣೆ ಮಾಡಲಾಯಿತು. ರಾಜೀನಾಮೆ ನೀಡುವ ಸಂದರ್ಭ ಯಡಿಯೂರಪ್ಪ ಅವರು ಕಣ್ಣೀರಿಟ್ಟಿದ್ದರು. ಅವರು ಏಕೆ ಕಣ್ಣೀರಿಟ್ಟಿದ್ದರು ಎಂದು ನನಗೆ ಗೊತ್ತು" ಎಂದಿದ್ದಾರೆ.
"ಹುಬ್ಬಳಿ-ಧಾರವಾಡ ನಗರದ ಬದಲು ಗುಂಡಿಗಳ ನಗರವಾಗಿದೆ. ಇಲ್ಲಿನ ರಸ್ತೆಗಳಲ್ಲಿ ಒಂದು ರೌಂಡ್ ಹೋಗಿ ಬಂದರೆ ಡ್ಯಾನ್ಸ್ ಕಲಿಯಬೇಕಿಲ್ಲ. ಕುಳಿತಲ್ಲೇ ಡ್ಯಾನ್ಸ್ ಮಾಡಬಹುದು. ರಸ್ತೆ ರಿಪೇರಿ ಕೆಲಸವೂ ನಡೆದಿಲ್ಲ. ಸಿಎಂ ಆದ ಬಳಿಕ ಹುಬ್ಬಳ್ಳಿಯಲ್ಲಿ ಬೊಮ್ಮಾಯಿ ಅವರ ಮನೆ ಬೀದಿ ರಸ್ತೆ ರಿಪೇರಿ ನಡೆಯುತ್ತಿದೆ. 15 ವರ್ಷ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದರೂ ಕೂಡಾ ಯಾವುದೇ ಒಂದು ಕೆಲಸ ಮಾಡಿಲ್ಲ. ಬಿಜೆಪಿ ಸುಳ್ಳಿನ ಸರಮಾಲೆಯನ್ನೇ ಹೆಣೆಯುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.