ನವದೆಹಲಿ, ಆ 29 (DaijiworldNews/PY): "ಭಾರತೀಯರನ್ನು ಅಫ್ಗಾನಿಸ್ತಾನದಂತಹ ಯುದ್ಧಪೀಡಿತ ಸನ್ನಿವೇಶದಲ್ಲಿರುವ ದೇಶದಿಂದ ಭಾರತ ರಕ್ಷಿಸಿದೆ. ಭಾರತೀಯರು ಅಪಾಯದಲ್ಲಿದ್ದರೆ ದೇಶ ಅವರ ಸಹಾಯಕ್ಕೆ ಯಾವತ್ತೂ ನಿಲ್ಲುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನವೀಕೃತ ಜಲಿಯನ್ ವಾಲಾಬಾಗ್ ಸ್ಮಾರಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, "ಭಾರತ ಹಲವು ಸವಾಲುಗಳನ್ನು ಮೆಟ್ಟಿನಿಂತು ಅಫ್ಘಾನಿಸ್ತಾನದಲ್ಲಿ ಅಪಾಯಾದಲ್ಲಿದ್ದ ಭಾರತೀಯರ ರಕ್ಷಣೆಗೆ ಮುಂದಾಗಿದೆ. ಅಲ್ಲಿದ್ದ ನೂರಾರು ಭಾರತೀಯರನ್ನು ಏರ್ ಲಿಫ್ಟ್ ಮೂಲಕ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾಗಿದೆ" ಎಂದು ತಿಳಿಸಿದ್ದಾರೆ.
"ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ನಾವು ಈ ಸಂಭ್ರಮದ ಹಿಂದೆ ಹಲವಾರು ಮಹನೀಯರ ತ್ಯಾಗ ಬಲಿದಾನ ಇದೆ ಎನ್ನುವ ವಿಚಾರವನ್ನು ನಾವು ಮರೆಯಬಾರದು. ಜಿಲಯನ್ ವಾಲಾ ಬಾಗ್ ಅನ್ನು ನಾವಿಂದ ಲೋಕಾರ್ಪಣೆಗೊಳಿಸಿದ್ದೇವೆ. ಜಲಿಯನ್ ವಾಲಾ ಬಾಗ್, ದೇಶದ ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಭಗತ್ ಸಿಂಗ್ ಸೇರಿಂದತೆ ಹಲವು ಸ್ವಾತಂತ್ರ್ಯ ಸೇನಾನಿಗಳಿಗೆ ಧೈರ್ಯ ನೀಡಿದ ಸ್ಥಳವಾಗಿದೆ" ಎಂದಿದ್ದಾರೆ.