ಗದಗ, ಆ 29 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಅವರು 70 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ರಾಷ್ಟ್ರೀಯ ಸಂಪತನ್ನು ನಗದೀಕರಣ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ" ಎಂದು ಶಾಸಕ ಹೆಚ್.ಕೆ.ಪಾಟೀಲ ದೂರಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನವರತ್ನಗಳು ಎಂದು ಕರೆಸಿಕೊಳ್ಳುವ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ, ವಿಮಾನ ನಿಲ್ದಾಣಗಳು, ಬಂದರು ಹಾಗೂ ಹಲವು ಪ್ರಮುಖ ಕ್ಷೇತ್ರಗಳನ್ನು ಪ್ರಧಾನಿ ಮೋದಿ ಅವರು ಹಮ್ ದೋ, ಹಮಾರಾ ದೋ ಕಂಪೆನಿಗೆ ಮಾರಾಟ ಮಾಡುತ್ತಿದ್ದಾರೆ" ಎಂದಿದ್ದಾರೆ.
"70 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಸೃಷ್ಟಿಸಿದ ರಾಷ್ಟ್ರೀಯ ಸಂಪತ್ತನ್ನು ಪ್ರಧಾನಿ ನರೇಂದ್ರ ಮೋದಿ ಅವರು 40 ವರ್ಷಗಳ ಅವಧಿಗೆ ಭೋಗ್ಯಕ್ಕೆ ಕೊಟ್ಟಿದ್ದಾರೆ. ಈ ಕಾರಣದಿಂದ ಸರ್ಕಾರಕ್ಕೆ 6 ಲಕ್ಷ ಕೋಟಿಗಳಷ್ಟೇ ಆದಾಯ ಬರಲಿದೆ. ಇದರ ಪರಿಣಾಮ ಮುಂಬರುವ ದಿನಗಳಲ್ಲಿ ಭೀಕರವಾಗಿ ಕಾಣಿಸಿಕೊಳ್ಳಲಿದೆ. ದೇಶದಲ್ಲಿ ಯುವಜನತೆಗೆ ಉದ್ಯೋಗ ಕಡಿತವಾಗಲಿದೆ. ಉಗ್ರಾಣಗಳ ಮಾರಾಟ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ದೇಶದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
"ಭವಿಷ್ಯದ ಜನತೆಗೆ ಭದ್ರತೆ ಕಲ್ಪಿಸುತ್ತಿದ್ದ ರಾಷ್ಟ್ರೀಯ ಸಂಪತ್ತೆಲ್ಲವೂ ಇಬ್ಬರ ಪಾಲಾಗುತ್ತಿರುವ ವಿರುದ್ದ ಯುವಜನತೆ ಧ್ವನಿ ಎತ್ತಬೇಕು" ಎಂದು ಆಗ್ರಹಿಸಿದ್ದಾರೆ.