ನವದೆಹಲಿ, ಆ 28 (DaijiworldNews/PY): ಪಂಜಾಬಿ ಗಾಯಕ ಯೋ ಯೋ ಹನಿ ಸಿಂಗ್ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದು ಹಿನ್ನೆಲೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗದಿದ್ದ ಕಾರಣ ದೆಹಲಿ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ತಾನಿಯಾ ಸಿಂಗ್, "ಕಾನೂನಿಗಿಂತ ಯಾರೂ ಕೂಡಾ ದೊಡ್ಡವರಲ್ಲ. ಈ ಪ್ರಕರಣವನ್ನು ಆರೋಪಿ ಲಘುವಾಗಿ ಪರಿಗಣಿಸಿರುವದನ್ನು ಕಂಡು ಆಶ್ಚರ್ಯವಾಗಿದೆ" ಎಂದಿದ್ದಾರೆ.
ತೀವ್ರ ಆರೋಗ್ಯ ಸಮಸ್ಯೆಯ ಕಾರಣದಿಂದ ಈ ಪ್ರಕರಣದ ವಿಚಾರಣೆಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡುವಂತೆ ಕೋರಿ ಹನಿಸಿಂಗ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ, ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಹನಿಸಿಂಗ್ ಪತ್ನಿ ಶಾಲಿನಿ ತಲ್ವಾರ್ ಅವರು ಭೌತಿಕವಾಗಿ ಹಾಜರಾಗಿದ್ದರು.
ನ್ಯಾಯಾಲಯಕ್ಕೆ ಹನಿ ಸಿಂಗ್ ಹಾಜರಾಗಿಲ್ಲ. ಅವರ ಆದಾಯದ ಪ್ರಮಾಣಪತ್ರವನ್ನು ನೀವು ಸಲ್ಲಿಸಿಲ್ಲ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಾಡಲು ಸಿದ್ದರಾಗಿ ಬಂದಿಲ್ಲ ಎಂದು ಹನಿಸಿಂಗ್ ಪರ ವಕೀಲರ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಹನಿ ಸಿಂಗ್ ಅವರಿಗೆ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ನ್ಯಾಯಾಲಯಕ್ಕೆ ಹಾಜರಾಗಲು ಕೊನೆಯ ಅವಕಾಶ ನೀಡಿದರು. ವಿಚಾರಣೆಗೆ ಹೀಗೆ ಗೈರಾಗಬಾರದು ಎಂದು ಎಚ್ಚರಿಕೆ ನೀಡಿದೆ.
ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಯೋ ಯೋ ಹನಿ ಸಿಂಗ್ ಅವರ ಪತ್ನಿ ಅವರ ವಿರುದ್ದ ದೂರು ದಾಖಲಿಸಿದ್ದಾರೆ.