ಶಿವಮೊಗ್ಗ, ಆ.28 (DaijiworldNews/HR): "ಅತ್ಯಾಚಾರಿಗಳಿಗೆ, ದುಷ್ಕೃತ್ಯ ಮಾಡುವವರಿಗೆ ಸರ್ಕಾರ ಹಾಗೂ ಪೊಲೀಸ್ ಭಯವಿಲ್ಲ. ಭಯ ಹುಟ್ಟುವ ಕಾನೂನು ತರುವ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ, ಜಾರಿಗೆ ತರುತ್ತೇವೆ" ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಆರು ವರ್ಷದ ಕಂದಮ್ಮನ ಮೇಲೂ ಈ ಹಿಂದೆ ಅತ್ಯಾಚಾರ ಮಾಡಿದ್ದ ಘಟನೆ ನಡೆದಿದ್ದು, ನಾನು ವಿಧಾನ ಪರಿಷತ್ ಸದಸ್ಯನಾಗಿದ್ದ ಅವಧಿಯಲ್ಲಿ ಕಾನೂನು ತಿದ್ದುಪಡಿಯ ಬಗ್ಗೆ ಚರ್ಚೆಯಾಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಜಾರ್ಜ್ ಅವರು ಕಾನೂನು ತಿದ್ದುಪಡಿ ಮಾಡುತ್ತೇನೆ ಎಂದಿದ್ದರು. ಆದರೆ ತಿದ್ದುಪಡಿ ಆಗಲಿಲ್ಲ. ಇವತ್ತಿನವರೆಗೂ ಅದೇ ಕಾನೂನು ಮುಂದುವರೆದಿದೆ" ಎಂದರು.
ಇನ್ನು ಅತ್ಯಾಚಾರ ಮಾಡುವ ನೀಚರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿಯಾಗಬೇಕು. ಕಾನೂನು ತಿದ್ದುಪಡಿ ಬಗ್ಗೆ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನೇಂದ್ರ ಅವರ ಕೆಲವು ಮಾತುಗಳು ಯಾರಿಗೂ ನೋವುಂಟು ಮಾಡಲು ಹೇಳಿದ್ದಲ್ಲ. ಮನಸ್ಸಿನ ಭಾವನೆಯಲ್ಲಿ ಯಾರಿಗೂ ಅಪಮಾನ ಮಾಡುವ ಉದ್ದೇಶ ಹೊಂದಿರಲಿಲ್ಲ. ಅದರ ಬಗ್ಗೆ ಯಾವ ದೃಷ್ಟಿಯಲ್ಲಿ ಯೋಚನೆ ಮಾಡುತ್ತೇವೆಯೋ ಹಾಗೇ ಆಗುತ್ತದೆ ಎಂದು ಹೇಳಿದ್ದಾರೆ.