ಬೆಂಗಳೂರು, ಆ 28 (DaijiworldNews/PY): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಒಬಿಸಿ ಕಾಯ್ದೆ ತಿದ್ದುಪಡಿ ಹಾಗೂ ಜಾತಿಗಣತಿ ಕುರಿತು ಬಿಜೆಪಿ ನಾಯಕರ ಬಗ್ಗೆ ಮಾಡಿರುವ ಟೀಕೆಗಳಿಗೆ ಬಿಜೆಪಿ ಆಕ್ಷೇಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ಕೇಂದ್ರ ಸರ್ಕಾರ ಒಬಿಸಿ ಕಾಯ್ದೆಗೆ ಸಂವಿಧಾನಿಕ ತಿದ್ದುಪಡಿ ತಂದಿದ್ದು ತರಾತುರಿಯಲ್ಲಲ್ಲ. ಹಿಂದುಳಿದ ವರ್ಗದ ಸರ್ವತೋಮುಖ ಏಳಿಗೆಗಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ತಿದ್ದುಪಡಿ ಮಸೂದೆ ಮಂಡನೆಯಾದಾಗ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದ ಕಾಂಗ್ರೆಸ್ಸಿಗರೂ ಕಲಾಪದಲ್ಲಿ ಭಾಗವಹಿಸಿದ್ದು ನೆನಪಿದೆಯೇ ಸಿದ್ದರಾಮಯ್ಯ?" ಎಂದು ಪ್ರಶ್ನಿಸಿದೆ.
"ಸಿದ್ದರಾಮಯ್ಯ ಅವರೇ, ನಿಮ್ಮ ಸರ್ಕಾರ ನಡೆಸಿದ್ದ ಜಾತಿ ಗಣತಿ ಬಗ್ಗೆ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದೆ ಕಾಂಗ್ರೆಸ್ಸಿಗರು. ವರದಿ ಸಲ್ಲಿಕೆಯಾಗುವುದಕ್ಕೆ ಮುನ್ನವೇ ಆಯ್ದ ಭಾಗ ಸೋರಿಕೆಯಾದರೆ ಆ ವರದಿಯ ಪಾವಿತ್ರ್ಯತೆ ಬಗ್ಗೆ ಯಾವ ಭಾವನೆ ಬರಲು ಸಾಧ್ಯ?" ಎಂದು ಕೇಳಿದೆ.
"ಜಾತಿ ಗಣತಿ ವರದಿಯ ಆಯ್ದ ಭಾಗಗಳು 2017 ರಲ್ಲಿ ಸೋರಿಕೆಯಾಗುವುದರ ಹಿಂದೆ ನಿಮ್ಮ ಪ್ರಗತಿಪರ ಪಟಾಲಂನ ಕೈವಾಡ ಇತ್ತಲ್ಲವೇ ಸಿದ್ದರಾಮಯ್ಯ?. ಚುನಾವಣೆಯ ದೃಷ್ಟಿಯಿಂದ ಜಾತಿ ಸಮೀಕರಣ ಮಾಡುವುದಕ್ಕಾಗಿಯೇ ನೀವು ಈ ಅಸಹ್ಯದ ಕೆಲಸ ಮಾಡಿಸಿದ್ದನ್ನು ಒಪ್ಪಿಕೊಳ್ಳುವಿರಾ!?" ಎಂದು ಪ್ರಶ್ನಿಸಿದೆ.
"ತಮ್ಮ ಆಡಳಿತಾವಧಿಯ ಮಧ್ಯಭಾಗದಲ್ಲಿ ಸಿದ್ದರಾಮಯ್ಯ ಅವರು ಜಾತಿಗಣತಿಗೆ ಆದೇಶ ನೀಡಿದ್ದರು. ಇದರ ಉದ್ದೇಶ ತಳ ಸಮುದಾಯದ ಕಲ್ಯಾಣವಾಗಿರಲಿಲ್ಲ. ಬದಲಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಕ್ರೋಢಿಕರಣದ ತಂತ್ರವಾಗಿತ್ತಲ್ಲವೇ?. ಆದರೂ, ಮಾಡಿದ ಕರ್ಮದಿಂದ ಸ್ವ ಕ್ಷೇತ್ರದಲ್ಲೂ ಸೋತು ಹೋದರು" ಎಂದಿದೆ.