ಬೆಂಗಳೂರು, ಆ 28 (DaijiworldNews/PY): "ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಹೋರಾಟಗಾರ್ತಿಯಂತೆ ಮಾತನಾಡಲು ಆಗುವುದಿಲ್ಲ" ಎಂದಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕಾಂಗ್ರೆಸ್ ಸರ್ಕಾರವಿರುವಾಗ ಎಲ್ಲಿಯೇ ಕೊಲೆ ನಡೆಯಲಿ, ಸುಲಿಗೆ ನಡೆಯಲಿ, ಅತ್ಯಾಚಾರ ನಡೆಯಲಿ ಅಲ್ಲಿಗೆ ರಣಹದ್ದುಗಳಂತೆ ಹಾರಿಬಂದು ಸರ್ಕಾರವೇ ಕಾರಣವೆಂದು ಎಗರಿ ಬೀಳುತ್ತಿದ್ದಿರಲ್ಲ ಶೋಭಾ ಕರಂದ್ಲಾಜೆ ಅವರೇ, ಉತ್ತರದಾಯಿತ್ವದ ಸ್ಥಾನ ಸಿಕ್ಕಮೇಲೆ ಬಾಯಿ ಮುಚ್ಚಿಕೊಳ್ಳುವ ನೀವು ಹೋರಾಟಗಾರ್ತಿಯಲ್ಲ, ಹಾರಾಟಗಾರ್ತಿ ಅಷ್ಟೇ!" ಎಂದು ವ್ಯಂಗ್ಯವಾಡಿದೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಶುಕ್ರವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಈಗ ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಹೋರಾಟಗಾರ್ತಿಯಂತೆ ಮಾತನಾಡಲು ಆಗುವುದಿಲ್ಲ" ಎಂದಿದ್ದರು.
"ಯಾವುದೇ ವಿಷಯಗಳ ಬಗ್ಗೆ ಹೋರಾಟಗಾರ್ತಿಯ ರೀತಿಯಲ್ಲಿ ತಾವು ಈಗ ಮಾತನಾಡಲು ಆಗುವುದಿಲ್ಲ" ಎಂದು ಹೇಳಿದ್ದರು.