ಕಲ್ಕತ್ತಾ, ಆ.28 (DaijiworldNews/HR): ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿಗೆ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಸೆಪ್ಟೆಂಬರ್ 6 ರಂದು ಪ್ರಕರಣದ ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಆತನಿಗೆ ಸಮನ್ಸ್ ನೀಡಲಾಗಿದ್ದು, ಅವರ ಪತ್ನಿ ರುಜಿರಾಗೆ ಇದೇ ರೀತಿಯ ಸಮನ್ಸ್ ಕಳುಹಿಸಲಾಗಿದೆ. ಮುಂದಿನ ತಿಂಗಳು ಬೇರೆ ಬೇರೆ ದಿನಾಂಕಗಳಲ್ಲಿ ಹಾಜರಾಗುವಂತೆ ಪ್ರಕರಣಕ್ಕೆ ಸಂಬಂಧಪಟ್ಟ ಕೆಲವರಿಗೆ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಕ್ರಿಮಿನಲ್ ಸೆಕ್ಷನ್ ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯವು ಬೇಧಿಸಿದ್ದು, ಈಸ್ಟರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್ ಗಣಿಗಳಿಗೆ ಸಂಬಂಧಿಸಿದ ಬಹುಕೋಟಿ ಕಲ್ಲಿದ್ದಲು ಕಳ್ಳತನದ ಹಗರಣವನ್ನು ಆರೋಪಿಸಿರುವ ಕೇಂದ್ರೀಯ ತನಿಖಾ ದಳದ (ಸಿಬಿಐ) ಎಫ್ಐಆರ್ ಅನ್ನು 2020 ರ ನವೆಂಬರ್ನಲ್ಲಿ ಅಧ್ಯಯನ ಮಾಡಿದೆ.