ಚೆನ್ನೈ, ಆ 28 (DaijiworldNews/PY): "ದೇಶೀಯ ಉದ್ಯಮವನ್ನು ವಿಶ್ವದರ್ಜೆಗೆ ಕೊಂಡೊಯ್ಯಲು ಸಹಾಯವಾಗುವಂತ ನೀತಿಯನ್ನು ಕೇಂದ್ರ ಸರ್ಕಾರ ರೂಪಿಸಿದ್ದು, ಇದನ್ನು ಸದುಪಯೋಗಿಸಿಕೊಳ್ಳುವ ಮೂಲಕ ಭಾರತವನ್ನು ದೇಶೀಯ ಹಡಗು ನಿರ್ಮಾಣ ಕೇಂದ್ರವಾಗಿ ಬೆಳೆಸಲು ಅವಕಾಶಗಳಿವೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಭಾರತೀಯ ಕರಾವಳಿ ಕಾರ್ಯಪಡೆಯ ವಿಗ್ರಹ ಹಡಗಿನ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, "ದೇಶದಲ್ಲಿರುವ ಈ ರೀತಿಯಾದ ಸಾಧ್ಯತೆಗಳು ಇರುವ ಕಾರಣ ಕೇಂದ್ರ ಸರ್ಕಾರ ದೇಶೀಯ ಉದ್ಯಮದ ಅಭಿವೃದ್ದಿಗೆ ನೆರವಾಗುವಂತಹ ನೀತಿಗಳನ್ನು ರೂಪಿಸಿದೆ. ಸಾರ್ವಜನಿಕ ಹಾಗೂ ಖಾಸಗಿ ವಲಯದ ಸಂಸ್ಥೆಗಳಿಗೆ ವಿಸ್ವ ದರ್ಜೆಯ ಉದ್ಯಮಿಗಳಾಗಲು ಈ ನೀತಿಗಳು ನೆರವಾಗುತ್ತವೆ" ಎಂದಿದ್ದಾರೆ.
"ಮುಂಬರುವ ಎರಡು ವರ್ಷಗಳಲ್ಲಿ ವಿಶ್ವದಾದ್ಯಂತ ಭದ್ರತೆಗಾಗಿ ಖರ್ಚು ಮಾಡುವ ಹಣ 2.1 ಟ್ರಿಲಿಯನ್ ಡಾಲರ್ಗೆ ತಲುಪಲಿದೆ. ಈ ವೆಚ್ಚವು, ಹೆಚ್ಚಿನ ರಾಷ್ಟ್ರಗಳ ಒಂದು ವರ್ಷದ ಬಜೆಟ್ಗಿಂತ ಅಧಿಕವಿದೆ. ಈ ವೆಚ್ಚ ಮುಂದಿನ ಐದು ವರ್ಷಗಳಲ್ಲಿ ಹೆಲವು ಪಟ್ಟು ಹೆಚ್ಚಾಗುವ ನಿರೀಕ್ಷೆಯೂ ಇದೆ. ಈ ಪರಿಸ್ಥಿತಿಯಲ್ಲಿ ನಮ್ಮ ಸಾಮರ್ಥ್ಯವನ್ನು ನಾವು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲು ಉತ್ತಮ ಅವಕಾಶ ಇದೆ" ಎಂದು ತಿಳಿಸಿದ್ದಾರೆ.
"ಐಸಿಜಿಎಸ್ ವಿಗ್ರಹದ ಹಡಗಿನ ವಿನ್ಯಾಸದ ಪರಿಕಲ್ಪನೆಯಿಂದ ಹಿಡಿದು ಹಡಗಿನ ಪೂರ್ಣ ಅಭಿವೃದ್ದಿಯ ತನಕ ದೇಶೀಯವಾಗಿ ನಿರ್ಮಾಣಗೊಂಡಿದೆ" ಎಂದು ಹೇಳಿದ್ದಾರೆ.
"ಭಾರತೀಯ ರಕ್ಷಣಾ ಕ್ಷೇತ್ರದ ಇತಿಹಾದಲ್ಲಿ ಪ್ರಥಮ ಬಾರಿಗೆ, ಖಾಸಗಿ ಕಂಪೆನಿ ಲಾರ್ಸನ್ ಹಾಗೂ ಟರ್ಬೊ ಲಿಮಿಟೆಡ್ ಸಹಭಾಗಿತ್ವದ ಜೊತೆ ಏಳು ಹಡಗುಗಳನ್ನು ನಿರ್ಮಾಣ ಮಾಡಿ, ಅವುಗಳ ಕಾರ್ಯಾರಂಭ ಮಾಡಿವೆ" ಎಂದಿದ್ದಾರೆ.
"ಎಲ್ ಆಂಡ್ ಟಿ ನಡುವೆ ಈ ಬಗೆಗಿನ ಒಪ್ಪಂದಕ್ಕೆ 2015ರಲ್ಲಿ ಸಹಿ ಹಾಕಲಾಗಿತ್ತು. ಏಳು ವರ್ಷಗಳಲ್ಲಿ ಇಷ್ಟೆಲ್ಲಾ ಹಡಗುಗಳ ನಿರ್ಮಾಣ ಕೆಲಸ ಆಗಿವೆ" ಎಂದು ತಿಳಿಸಿದ್ದಾರೆ.