ಹೈದರಾಬಾದ್, ಆ.28 (DaijiworldNews/HR): ಶನಿವಾರ ಬೆಳಗ್ಗೆ ತೆಲಂಗಾಣದ ನಿರ್ಮಲ ಜಿಲ್ಲೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮದುವೆಯಾದ ಮೂರೇ ದಿನದಲ್ಲಿ ನವವಿವಾಹಿತೆಯೊಬ್ಬಳು ದಾರುಣವಾಗಿ ಮೃತಪಟ್ಟಿದ್ದು, ಅವಘಡದಲ್ಲಿ ಆಕೆಯ ತಂದೆ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತಪಟ್ಟವರನ್ನು ನವವಿವಾಹಿತೆ ಮೌನಿಕಾ (25), ತಂದೆ ರಾಜಯ್ಯ (50) ಎಂದು ಗುರುತಿಸಲಾಗಿದೆ.
ನಿರ್ಮಲ ಜಿಲ್ಲೆಯ ಕೊಡೆಮ್ ವಲಯದ ಪಾಂಡವಪುರ್ ಬಳಿ ಕಣಿವೆಯೊಂದಕ್ಕೆ ಕಾರು ಉರುಳಿಬಿದ್ದು ಈ ಅವಘಡ ಸಂಭವಿಸಿದೆ. ಮಹಾರಾಷ್ಟ್ರದ ಬಲಹರ್ಷಾದಲ್ಲಿರುವ ವರನ ಮನೆಯಲ್ಲಿ ರಿಸೆಪ್ಷನ್ ಮುಗಿಸಿಕೊಂಡು ತವರಿಗೆ ಹಿಂದಿರುಗುವಾಗ ಕಾರು ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.
ಇನ್ನು ಆಗಸ್ಟ್ 25ರಂದು ಮೌನಿಕಾ ಮದುವೆ ನಡೆದಿದ್ದು, ಇದಾದ ಮೂರೇ ದಿನಗಳಲ್ಲಿ ಮೌನಿಕಾ ದಾರುಣವಾಗಿ ಮೃತಪಟ್ಟಿದ್ದು, ವರ ಜನಾರ್ಧನ್ ಕೂಡ ಅದೇ ಕಾರಿನಲ್ಲಿದ್ದರು. ಅವರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.