ಬೆಂಗಳೂರು, ಆ.28 (DaijiworldNews/HR): ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದ ಹಿನ್ನೆಲೆಯಲ್ಲಿ ಸಂಜೆ 6.30ರ ಬಳಿಕ ವಿವಿ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿನಿಯರ ಓಡಾಟವನ್ನು ನಿಷೇಧಿಸಿ ಮೈಸೂರು ವಿಶ್ವವಿದ್ಯಾಲಯ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆಯಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂಜೆ 6.30ರ ಬಳಿಕ ವಿವಿ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿನಿಯರ ಓಡಾಟವನ್ನು ನಿಷೇಧಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಕುಲಪತಿ ಪ್ರೊ.ಹೇಮಂತ ಕುಮಾರ್ ಅವರಿಗೆ ಸೂಚನೆ ನೀಡಿದ್ದೇನೆ" ಎಂದರು.
ಇನ್ನು ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ ಗಳು ಬಹಳ ವಿಶಾಲವಾಗಿರುತ್ತವೆ ಎಂಬುದೇನೋ ನಿಜ. ಹಾಗೆಂದು ವಿದ್ಯಾರ್ಥಿನಿಯರು ಓಡಾದಂತೆ ನಿರ್ಬಂಧ ಹೇರುವುದು ಸರಿಯಲ್ಲ. ಅದರ ಬದಲಿಗೆ ರಕ್ಷಣಾ ಕ್ರಮಗಳನ್ನು ಕೈಗೊಂಡು ಸುರಕ್ಷಿತವಾದ ವಿವಿ ಕ್ಯಾಂಪಸ್ ಗಳನ್ನು ರೂಪಿಸಬೇಕು" ಎಂದು ಎಲ್ಲ ವಿವಿ ಕುಲಪತಿಗಳಿಗೂ ಸಚಿವರು ಸೂಚಿಸಿದ್ದಾರೆ.
ಕಾಲೇಜುಗಳಲ್ಲಿ ವ್ಯಾಪಕ ನಿಗಾ ಇರಿಸುವುದರೊಂದಿಗೆ ಭದ್ರತಾ ಸಿಬ್ಬಂದಿಯಿಂದ ಪೆಟ್ರೋಲಿಂಗ್ ಮಾಡಬೇಕು. ಅಗತ್ಯವಾದ ಎಲ್ಲ ಕಡೆಗಳಲ್ಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಾನೂನು-ಸುವವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ದಿಕ್ಕಿನಲ್ಲೂ ತೀವ್ರ ನಿಗಾ ಇಟ್ಟಿರಬೇಕು. ಈ ಬಗ್ಗೆ ಎಲ್ಲ ಕುಲಪತಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ತಿಳಿಸಿದ್ದಾರೆ.