ನವದೆಹಲಿ, ಆ 28 (DaijiworldNews/MS): ಆಗಸ್ಟ್ 16ರಂದು ಅತ್ಯಾಚಾರ ಸಂತ್ರಸ್ತೆ ಹಾಗೂ ಪ್ರಕರಣದ ಸಾಕ್ಷಿಯೊಬ್ಬರು ಸುಪ್ರೀಂ ಕೋರ್ಟ್ ಹೊರಭಾಗದಲ್ಲಿ ಆತ್ಮಾಹುತಿ ಮಾಡಿಕೊಂಡು ಸಾವನ್ನಪ್ಪಿದ ಘಟನೆಗೆ ಸಂಬಂಧಪಟ್ಟಂತೆ ಮಾಜಿ ಐಪಿಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ.
ಅಮಿತಾಭ್ ಠಾಕೂರ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಶುಕ್ರವಾರ ಬಂಧಿಸಲಾಗಿದ್ದು, ಸೆಪ್ಟೆಂಬರ್ 9ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಬಿಎಸ್ಪಿ ಸಂಸದ ಅತುಲ್ ರಾಯ್ 2019ರಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದರು. ಇದಾದ ನಂತರ ಅತುಲ್ ರಾಯ್ ಪೊಲೀಸರಿಗೆ ಶರಣಾಗಿದ್ದರು. ನಂತರ ಜೈಲು ಸೇರಿದ್ದಾರೆ. ಅಂದಿನಿಂದ ಜೈಲಿನಲ್ಲಿದ್ದಾರೆ. ಈ ಘಟನೆಯ ನಂತರ ಅತ್ಯಾಚಾರ ಆರೋಪ ಮಾಡಿದ್ದ ಮಹಿಳೆಯ ವಿರುದ್ಧ, ಅತುಲ್ ರಾಯ್ ಸಹೋದರ ವಂಚನೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಆಕೆಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಆಕೆ ನಾಪತ್ತೆಯಾಗಿದ್ದರು.
ಈ ನಡುವೆ ಆಗಸ್ಟ್ 16ರಂದು ತನ್ನ ಸ್ನೇಹಿತನೊಂದಿಗೆ ಸುಪ್ರೀಂ ಕೋರ್ಟ್ಗೆ ಬಂದ ಮಹಿಳೆ, ನ್ಯಾಯಾಲಯ ಪ್ರವೇಶಿಸಲು ಪ್ರಯತ್ನಿಸಿದರು. ಅದಕ್ಕೆ ಅವಕಾಶ ನೀಡದಿದ್ದಾಗ, ತನ್ನ ಸ್ನೇಹಿತನೊಂದಿಗೆ ನ್ಯಾಯಾಲಯದ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆ ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಸ್ನೇಹಿತ ಕಳೆದ ಶನಿವಾರವೇ ಮೃತಪಟ್ಟಿದ್ದ.