ಬೆಂಗಳೂರು, ಆ 28 (DaijiworldNews/PY): ಮೈಸೂರು ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, "ಮೊದಲ ಬಾರಿಗೆ ಸಚಿವರಾದವರಿಗೆ ಗೃಹ ಖಾತೆ ಏಕೆ ನೀಡಬೇಕಿತ್ತು?" ಎಂದು ಪ್ರಶ್ನಿಸಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸೇರಿದಂತೆ ವಿಧಾನ ಪರಿಷತ್ ಮಾಜಿ ಸಭಾಪತಿ ವಿಆರ್ ಸುದರ್ಶನ್ ಹಾಗೂ ಹಲವು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.
"ಗೃಹ ಖಾತೆಯನ್ನು ಮೊದಲ ಬಾರಿಗೆ ಸಚಿವರಾದವರಿಗೆ ಏಕೆ ನೀಡಬೇಕಿತ್ತು?. ಬಿಜೆಪಿಯು ಗೃಹ ಸಚಿವರನ್ನು ಸಮರ್ಥರೆಂದು ಪರಿಗಣಿಸಿದರೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಅಪ್ಡೇಟ್ಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಏಕೆ ಪಡೆದುಕೊಳ್ಳಬೇಕು?" ಎಂದು ಕೇಳಿದೆ.
ಈ ಬಗ್ಗೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, "ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು" ಎಂದಿದ್ದಾರೆ.
"ಅತ್ಯಾಚಾರದಂತಹ ದುಷ್ಕೃತ್ಯಗಳು ಸಮಾಜದಲ್ಲಿ ನಡೆಯಲೇಬಾರದು. ಈ ರೀತಿಯ ಕೃತ್ಯದಲ್ಲಿ ಭಾಗಿಯಾಗುವವರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಏನೆಲ್ಲಾ ಕತ್ತರಿಸಬೇಕೋ ಅದನ್ನೆಲ್ಲಾ ಕತ್ತರಿಸಿಬಿಡಬೇಕು" ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.