ಬೆಂಗಳೂರು, ಆ 28 (DaijiworldNews/PY): ಹಿರಿಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರನ್ನು ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಅವರು ಅಧಿಕಾರ ಬಿಟ್ಟುಕೊಡುವ ದಿನದಿಂದ ಜಾರಿಗೆ ಬರುವಂತೆ ಮುಖ್ಯ ನ್ಯಾಯಮೂರ್ತಿ ಅವರ ಕಚೇರಿಯ ಕರ್ತವ್ಯಗಳನ್ನು ಶರ್ಮಾ ಅವರು ನಿರ್ವಹಿಸಿಲಿದ್ದಾರೆ ಎಂದು ಅಧಿಸೂಚನೆ ಹೇಳಿದೆ.
ಆಗಸ್ಟ್ 25ರಂದು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್ ಶ್ರೀನಿವಾಸ್ ಓಕಾ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಹಿನ್ನೆಲೆ ಈ ಅಧಿಸೂಚನೆ ಹೊರಡಿಸಲಾಗಿದೆ. ನ್ಯಾ.ಬಿ ವಿ ನಾಗರತ್ನ ಅವರನ್ನೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಅಭಯ ಶ್ರೀನಿವಾಸ ಓಕಾ, ಕೇರಳ ಹೈಕೋರ್ಟ್ನ ನ್ಯಾಯಮೂರ್ತಿ ಸಿ.ಟಿ. ರವಿಕುಮಾರ್, ತೆಲಂಗಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೋಹ್ಲಿ, ಗುಜರಾತ್ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಕ್ರಂನಾಥ್, ಸಿಕ್ಕಿಂ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಿತೇಂದ್ರಕುಮಾರ್ ಮಹೇಶ್ವರಿ, ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್, ಗುಜರಾತ್ ಹೈಕೋರ್ಟ್ನ ಬೇಲಾ ಎಂ. ತ್ರಿವೇದಿ, ಹಿರಿಯ ವಕೀಲ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಇವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ.