ಮುಂಬೈ, ಆ 28 (DaijiworldNews/PY): ಡ್ರಗ್ಸ್ ಪ್ರಕರಣದಲ್ಲಿ ಜನಪ್ರಿಯ ಕಿರುತೆರೆ ಹಾಗೂ ಚಲನಚಿತ್ರ ನಟ ಗೌರವ್ ದೀಕ್ಷಿತ್ ಅನ್ನು ನಾರ್ಕೋಟಿಕ್ಸ್ ಬ್ಯೂರೋ ಬಂಧಿಸಿದೆ.
ಗೌರವ್ ದೀಕ್ಷಿತ್ ಅನ್ನು ವಶಕ್ಕೆ ಪಡೆದುಕೊಂಡ ಬಳಿಕ ಅವರ ನಿವಾಸದಿಂದ ಎಂಡಿಎಂಎ ಹಾಗೂ ಚರಸ್ ಜಪ್ತಿ ಮಾಡಲಾಗಿದೆ. ತನಿಖಾ ಸಂಸ್ಥೆಯು ಲೋಖಂಡ್ ವಾಲಾದಲ್ಲಿರುವ ಆತನ ಮನೆಯಲ್ಲಿ ಹೆಚ್ಚಿನ ಪ್ರಮಾಣದ ನಿಷೇಧಿತ ಡ್ರಗ್ಸ್ಗಳನ್ನು ಪತ್ತೆ ಮಾಡಿದೆ ಎಂದು ವರದಿ ತಿಳಿಸಿದೆ.
ನಟ ಅಜಾಜ್ ಖಾನ್ ವಿಚಾರಣೆಗೆ ಸಂಬಂಧಿಸಿದಂತೆ ಗೌರವ್ ದೀಕ್ಷಿತ್ ಅವರನ್ನು ಬಂಧಿಸಲಾಗಿದೆ.
ಗೌರವ್ ಅವರ ಮುಂಬೈ ನಿವಾಸದ ಮೇಲೆ ಕೆಲವು ತಿಂಗಳ ಹಿಂದೆ ಎನ್ಸಿಬಿ ದಾಳಿ ಮಾಡಿತ್ತು. ಆ ಸಂದರ್ಭ ನಟ ಗೌರವ್ ನಾಪತ್ತೆಯಾಗಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಗೌರವ್ ಭಾಗಿಯಾಗಿದ್ದಾರೆ ಎಂದು ಎನ್ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರು ಹೇಳಿಕೆ ನೀಡಿದ್ದರು.
ಅಜಾಜ್ ಖಾನ್ ವಿಚಾರಣೆಯ ವೇಳೆ ಗೌರವವ ದೀಕ್ಷಿತ್ ಅವರ ಹೆಸರನ್ನು ಬಹಿರಂಗಪಡಿಸಿದ್ದು, ದೀಕ್ಷಿತ್ನಿಂದ ಅವರು ಎಂಡಿಎಂಎ ಹಾಗೂ ಇತರ ಔಷಧಿಗಳನ್ನು ಖರೀದಿ ಮಾಡುತ್ತಿದ್ದರು ಎಂದು ಒಪ್ಪಿಕೊಂಡಿದ್ದರು. ಪ್ರಾಥಮಿಕ ತನಿಖೆಯ ಬಳಿಕ ದೀಕ್ಷಿತ್ ಬಾಲಿವುಡ್ನಲ್ಲಿ ಡ್ರಗ್ಸ್ ಪೂರೈಸುತ್ತಾರೆ ಎನ್ನುವ ವಿಚಾರ ತಿಳಿದುಬಂದಿದೆ. ಈ ಹಿನ್ನೆಲೆ ಶುತ್ರವಾರ ರಾತ್ರಿ ಲೋಖಂಡ್ ವಾಲಾದಲ್ಲಿರುವ ದೀಕ್ಷಿತ್ ಅವರ ನಿವಾಸಕ್ಕೆ ಎನ್ಸಿಬಿಯ ತಂಡ ದಾಳಿ ಮಾಡಿದೆ.
'ಹ್ಯಾಪಿ ಫಿರ್ ಭಾಗ್ ಜಾಯೇಗಿ', 'ದಿ ಮ್ಯಾಜಿಕ್ ಆಫ್ ಸಿನೆಮಾ', 'ಹ್ಯಾಪಿ ಭಾಗ್ ಜಾಯೇಗಿ', 'ದಾಹೆಕ್: ಎ ರೆಸ್ಟ್ಲೆಸ್ ಮೈಂಡ್',ಮತ್ತು 'ಗಂಗಾ ಕೆ ಪಾರ್ ಸಾಯನ್ ಹಮಾರ್ ಚಿತ್ರಗಳಲ್ಲಿ ಗೌರವ್ ಕಾಣಿಸಿಕೊಂಡಿದ್ದಾರೆ. ಇವರು ಸೀತಾ ಔರ್ ಗೀತಾ' ಸೇರಿದಂತೆ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.