ಜೈಪುರ/ನವದೆಹಲಿ, ಆ.27 (DaijiworldNews/HR): ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಜೈಪುರದ ಎಸ್ಎಂಎಸ್' ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಯಂಜಿಯೋಪ್ಲಾಸ್ಟಿ ನಡೆಸಲಾಗಿದೆ.
ಈ ಕುರಿತು ಎಸ್ಎಂಎಸ್' ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಾಂಶುಪಾಲ ಡಾ. ಸುಧೀರ್ ಭಂಡಾರಿ ಮಾಹಿತಿ ನೀಡಿದ್ದು, "ಗೆಹ್ಲೋಟ್ ಅವರಿಗೆ ಆಯಂಜಿಯೋಪ್ಲಾಸ್ಟಿ ನಡೆಸಲಾಗಿದ್ದು, ಯಶಸ್ವಿಯಾಗಿ ಒಂದು ಸ್ಟೆಂಟ್ ಅಳವಡಿಸಲಾಗಿದೆ. ಅವರು ಸದ್ಯ ಆರೋಗ್ಯವಾಗಿದ್ದಾರೆ" ಎಂದು ತಿಳಿಸಿದ್ದಾರೆ.
ಗೆಹ್ಲೋಟ್ ಅವರು ಇಂದು ಮಧ್ಯಾಹ್ನ ಟ್ವೀಟ್ ಮಾಡಿದ್ದು, ಕೊರೊನಾ ನಂತರದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನಿನ್ನೆಯಿಂದ ಎದೆ ನೋವು ಇದೆ. ಈಗಷ್ಟೇ ನನ್ನ ಸಿಟಿ ಆಯಂಜಿಯೊ ಆಯಿತು. ಆಯಂಜಿಯೊಪ್ಲಾಸ್ಟಿ ನಡೆಸಬೇಕಿದೆ. ಇದು ಎಸ್ಎಂಎಸ್ ಆಸ್ಪತ್ರೆಯಲ್ಲಿ ನಡೆಯಲಿದ್ದು, ಸಂತಸದಿಂದ ಇದ್ದೇನೆ. ಚೆನ್ನಾಗಿದ್ದೇನೆ, ಶೀಘ್ರದಲ್ಲೇ ಕರ್ತವ್ಯಕ್ಕೆ ಮರಳಲಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ, ಹಾರೈಕೆಗಳಿರಲಿ" ಎಂದು ಮನವಿ ಮಾಡಿದ್ದರು.
ಇನ್ನು ಅಶೋಕ್ ಅವರೇ ನಿಮಗೆ ಉತ್ತಮ ಆರೋಗ್ಯ ದೊರೆಯಲಿ, ಬೇಗನೆ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.