ಬೆಂಗಳೂರು, ಆ 27 (DaijiworldNews/PY): "ಸರ್ಕಾರದ ಸಚಿವರುಗಳು ಸಂತ್ರಸ್ತೆಯ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಕೊಡುತ್ತಾ ತಮ್ಮ ಮನಸ್ಸಿನ ವಿಕೃತಿಯನ್ನು ಕಾರಿಕೊಳ್ಳುತ್ತಿದ್ದಾರೆ. ಇಂತಹ ಸರ್ಕಾರದಲ್ಲಿ ಸ್ತ್ರೀಯರಿಗೆ ರಕ್ಷಣೆ ಇದೆಯೆ.?" ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಸರ್ಕಾರದ ಬೇಜಾವಬ್ಧಾರಿ ಎದ್ದು ಕಾಣುತ್ತಿದೆ. ಈ ಸರ್ಕಾರದಿಂದ ಅತ್ಯಾಚಾರಿಗಳ ಪತ್ತೆ ಇನ್ನೂ ಸಾಧ್ಯವಾಗಿಲ್ಲ. ಆದರೆ ಈ ಸರ್ಕಾರದ ಸಚಿವರುಗಳು ಸಂತ್ರಸ್ತೆಯ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ಕೊಡುತ್ತಾ ತಮ್ಮ ಮನಸ್ಸಿನ ವಿಕೃತಿಯನ್ನು ಕಾರಿಕೊಳ್ಳುತ್ತಿದ್ದಾರೆ. ಇಂತಹ ಸರ್ಕಾರದಲ್ಲಿ ಸ್ತ್ರೀಯರಿಗೆ ರಕ್ಷಣೆ ಇದೆಯೆ.?" ಎಂದು ಕೇಳಿದ್ದಾರೆ.
"ಮೂಲಭೂತವಾದದ ಪ್ರತಿಪಾದಕರಾದ ಬಿಜೆಪಿಯವರು ಸ್ತ್ರೀ ಸ್ವಾತಂತ್ರ್ಯದ ಶಾಶ್ವತ ವಿರೋಧಿಗಳು. ಹಾಗಾಗಿಯೇ ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ನಾಯಕರು ಸಂವೇದನಾರಹಿತಾ ಹೇಳಿಕೆ ಕೊಡುತ್ತಿದ್ದಾರೆ. ಆರಗ ಜ್ಞಾನೇಂದ್ರ ಹಾಗೂ ಆನಂದ್ ಸಿಂಗ್ ಹಾಗೂ ಅವರ ಹೇಳಿಕೆಗಳು ಸ್ತ್ರೀ ವಿರೋಧಿ ಮನಸ್ಥಿತಿಯ ಸಂಕೇತವಲ್ಲದೆ ಮತ್ತೇನು?. ಇದೇನಾ ಬಿಜೆಪಿ ಸಂಸ್ಕೃತಿ?" ಎಂದು ಪ್ರಶ್ನಿಸಿದ್ದಾರೆ.
"ಅತ್ಯಾಚಾರ, ಕೇವಲ ಹೆಣ್ಣಿನ ದೇಹದ ಮೇಲೆ ನಡೆಯುವ ಶೋಷಣೆಯಲ್ಲ. ಅದು ಆಕೆಯ ಮನಸ್ಸು ಹಾಗೂ ಆತ್ಮಗೌರವದ ಮೇಲೂ ನಡೆಯುವ ಹೀನಾತಿ ಹೀನ ಕ್ರೌರ್ಯ. ಅತ್ಯಾಚಾರಕ್ಕೊಳಗಾದ ಹೆಣ್ಣು ಮಾನಸಿಕವಾಗಿ ಕುಗ್ಗಿರುತ್ತಾಳೆ. ಸಚಿವರಾದವರು ಇಂತಹ ಸಂದರ್ಭದಲ್ಲಿ ಸಂತ್ರಸ್ತೆಗೆ ಮಾನಸಿಕ ಸ್ಥೈರ್ಯ ತುಂಬಬೇಕು. ಆದರೆ ಈ ಸಚಿವರುಗಳೇ ಆಕೆಯ ಚಾರಿತ್ರ್ಯವಧೆ ಮಾಡಿದರೆ ಹೇಗೆ?" ಎಂದು ಕೇಳಿದ್ದಾರೆ.