ದಾವಣಗೆರೆ, ಆ 27 (DaijiworldNews/PY): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಬಿಜೆಪಿ ನಾಯಕರ ಬೇಜವಾಬ್ದಾರಿ ಹೇಳಿಕೆಗಳು ಮುಂದುವರೆದಿದ್ದು, ಇದೀಗ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್, "ಮೈಸೂರಿನಲ್ಲಾದ ಘಟನೆ ಬಗ್ಗೆ ನನಗೇನು ಗೊತ್ತು?. ನಾನೇನು ನೋಡಿದ್ದೇನಾ, ಮಾಡಿದ್ದೇನಾ?" ಎಂದು ಕೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೈಸೂರಿನಲ್ಲಿ ನಡೆದ ಘಟನೆಯ ಬಗ್ಗೆ ನನಗೆ ಏನು ತಿಳಿದಿಲ್ಲ. ನಾನು ಬೆಳಗ್ಗೆ ಮನೆಯಿಂದ ಹೊರಟರೆ ಮನೆಗೆ ವಾಪಾಸ್ಸು ಬರುವುದು ರಾತ್ರಿ 11 ಗಂಟೆಯಾಗುತ್ತದೆ. ಹಾಗಿರುವಾಗ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಬಗಗೆ ನನ್ನನ್ನು ಕೇಳಿದರೆ ನನಗೇನು ಗೊತ್ತು?. ಈ ಬಗ್ಗೆ ನಾನೇನು ಹೇಳಲು ಸಾಧ್ಯ?. ನಾನು ನೋಡಿದ್ದೇನಾ, ಮಾಡಿದ್ದೇನಾ?" ಎಂದು ಪ್ರಶ್ನಿಸಿದ್ದಾರೆ.
"ದಾವಣಗೆರೆಯಲ್ಲಿ ಏನಾದರೂ ಘಟನೆ ನಡೆದಿದ್ದಲ್ಲಿ ನಾನು ಪ್ರತಿಕ್ರಿಯೆ ನೀಡುತ್ತಿದ್ದೆ. ಆ ಬಗ್ಗೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳು ಸೂಚನೆ ನೀಡುತ್ತಿದ್ದೆ. ಆದರೆ, ನನಗೆ ಮೈಸೂರಿನಲ್ಲಿ ನಡೆದ ಘಟನಯೆ ಬಗ್ಗೆ ತಿಳಿದೇ ಇಲ್ಲ" ಎಂದಿದ್ದಾರೆ.