ಬೆಂಗಳೂರು, ಆ 27 (DaijiworldNews/PY): ಮೈಸೂರಿನಲ್ಲಿ ವಿದ್ಯಾರ್ಥಿನ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿದ್ದ ಹೇಳಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಯಾರಿಗೂ ನೋವುಂಟು ಮಾಡುವ ನಿಟ್ಟಿನಲ್ಲಿ ಆ ಹೇಳಿಕೆ ನೀಡಿಲ್ಲ. ನಾನು ಈಗಾಗಲೇ ಈ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.
"ಈ ಬಗ್ಗೆ ನಾನು ಮನನೊಂದು ಮಾತನಾಡಿದ್ದೆ. ಈ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ನಾನು ನನ್ನ ಮಾತನ್ನು ವಾಪಾಸ್ಸು ತೆಗೆದುಕೊಳ್ಳುತ್ತೇನೆ" ಎಂದಿದ್ದಾರೆ.
"ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ಶಾಕ್ನಿಂದ ಹೊರಗೆ ಬಂದಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆ ಪ್ರಮುಖವಾಗುತ್ತದೆ. ಶೀಘ್ರದಲ್ಲೇ ತಪ್ಪಿತಸ್ಥರನ್ನು ಬಂಧಿಸುತ್ತಾರೆ" ಎಂದು ತಿಳಿಸಿದ್ದಾರೆ.
"ಸಂತ್ರಸ್ತೆಯನ್ನು ನಾನು ಮಗಳ ಸ್ಥಾನದಲ್ಲಿ ನೋಡುತ್ತಿದ್ದೇನೆ. ಆ ಮಾತನ್ನು ನಾನು ಆತಂಕದಿಂದ ಹೇಳಿದ್ದೇನೆ. ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಆ ಮಾತನ್ನು ನಾನು ವಾಪಾಸ್ಸು ತೆಗೆದುಕೊಳ್ಳುತ್ತೇನೆ. ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ" ಎಂದಿದ್ದಾರೆ.